ಲೋಕಸಭಾ ಚುನಾವಣೆಯ ಆರಂಭದಲ್ಲಿ ‘ಅಬ್ಕಿ ಬಾರ್ 400 ಸೌ ಪಾರ್’ ಎಂಬ ಘೋಷಣೆ ಕೂಗಿದ್ದ ಮೋದಿ ಅವರು, ಈಗ ಮೂರನೇ ಭಾರಿಗೆ ಪ್ರಧಾನಿ ಆಗುವುದೇ ಕಷ್ಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 296 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಂದಹಾಗೆ, ಈ ಪೈಕಿ ಬಿಜೆಪಿ 241 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, 400 ಸ್ಥಾನಗಳಿಗೆ ಬರೋಬ್ಬರಿ 159 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ ಭಾರೀ ಮುಖಭಂಗವಾಗಿದೆ.
ಅಲ್ಲದೆ, ಬಿಜೆಪಿ ಈ ಬಾರಿ 241 ಸ್ಥಾನಗಳಲ್ಲಿ ಗೆದ್ದರೂ, 2019ರಲ್ಲಿ ಗೆದ್ದಿದ್ದ 303 ಸ್ಥಾನಗಳಿಗೆ ಹೋಲಿಸಿದರೆ, 58 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಆದರೆ, ಬಿಜೆಪಿ ಮತ್ತು ಎನ್‌ಡಿಎ ಇನ್ನೂ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ, 542 ಸ್ಥಾನಗಳ ಪೈಕಿ ಎನ್‌ಡಿಎ 296 ಕ್ಷೇತ್ರ ಮತ್ತು ‘ಇಂಡಿಯಾ’ ಒಕ್ಕೂಟ 230 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ. ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ತಮ್ಮ ಸ್ಥಾನಗಳನ್ನು ವೃದ್ಧಿಸಿಕೊಳ್ಳುತ್ತಿವೆ. ಇದು ಬಿಜೆಪಿಯಲ್ಲಿ ಆಂತಕ ಸೃಷ್ಟಿಸಿದೆ.
ಮಾತ್ರವಲ್ಲದೆ, ಕಾಂಗ್ರೆಸ್ ನಾಯಕರು ಬಿಹಾರದ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಟಿಡಿಎಂ ನಾಯಕ ಚಂದ್ರಬಾಬು ನಾಯ್ಡು ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಈ ಎರಡೂ ಪಕ್ಷಗಳು ಎನ್‌ಡಿಎ ಭಾಗವಾಗಿದ್ದು, ಅವರು ಬಿಜೆಪಿ ಜೊತೆಗಿನ ಸಖ್ಯ ತೊರೆದರೆ, ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಅಂತೆಯೇ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ್ತಷ್ಟು ಬಲ ಬರಲಿದ್ದು, ನಿರಾಯಾಸವಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.