ಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ ಬುಧವಾರ ಹೇಳಿದ್ದಾರೆ. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾದ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿಯ ಎಂಟು ಶಾಸಕರು, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ(ಎನ್‌ಪಿಪಿ)ಯ ಒಬ್ಬರು ಮತ್ತು ಮತ್ತೊಬ್ಬರು ಸ್ವತಂತ್ರ ಶಾಸಕರು ಸೇರಿ ಒಟ್ಟು ಮಣಿಪುರದ ಹತ್ತು ಶಾಸಕರು ಬುಧವಾರ ಇಂಫಾಲ್‌ನ ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಸರ್ಕಾರವನ್ನು ರಚಿಸಬೇಕು ಎಂದು ಶಾಸಕರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಮತ್ತೆ ಉದ್ವಿಗ್ನತೆ: ಪ್ರತಿಭಟನಾಕಾರರು, ಭದ್ರತಾ ಪಡೆಯ ನಡುವೆ ಘರ್ಷಣೆ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸ್ವತಂತ್ರ ಶಾಸಕ ಸಪಮ್ ನಿಶಿಕಾಂತ ಸಿಂಗ್, “ಜನಪ್ರಿಯ ಸರ್ಕಾರ ರಚನೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಮಣಿಪುರದ ಹಿತದೃಷ್ಟಿಯಿಂದ ಎಲ್ಲಾ ಎನ್‌ಡಿಎ ಶಾಸಕರು ಜನಪ್ರಿಯ ಸರ್ಕಾರ ಸ್ಥಾಪನೆಗೆ ಮುಂದಾಗಿದ್ದಾರೆ. ನಮಗೆ ಸಾರ್ವಜನಿಕರ ಬೆಂಬಲ ಬೇಕು. ತ್ವರಿತ ಮತ್ತು ಸುಗಮ ಸರ್ಕಾರ ರಚನೆಗೆ ಸ್ವಲ್ಪ ಕಷ್ಟವಾಗುತ್ತದೆ” ಎಂದು ಹೇಳಿದರು.
“ನಾವು ರಾಜ್ಯಪಾಲರಿಗೆ 22 ಮಂದಿ ಸಹಿ ಹಾಕಿದ ಪತ್ರ ನೀಡಿದ್ದೇವೆ. ನಾವು ಪ್ರಧಾನಿಗೂ ಅದೇ ಪತ್ರ ನೀಡಿದ್ದೇವೆ. ಕೆಲವರು ಇಲ್ಲಿಲ್ಲ ಆದರೆ ಎಲ್ಲರೂ ಒಟ್ಟಾಗಿದ್ದಾರೆ. ಎಲ್ಲರೂ ಜನಪ್ರಿಯ ಸರ್ಕಾರವನ್ನು ಬಯಸುತ್ತಾರೆ. ಇದು ಜನರ ಕಲ್ಯಾಣಕ್ಕಾಗಿ ಮುಖ್ಯ” ಎಂದರು.
ನಿಯೋಗದ ಭಾಗವಾಗಿದ್ದ ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್, 44 ಶಾಸಕರು ಹೊಸ ಸರ್ಕಾರ ರಚಿಸಲು ಸಿದ್ಧರಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಣಿಪುರ ವಿಧಾನಸಭೆಯು 60 ಸ್ಥಾನಗಳನ್ನು ಹೊಂದಿದೆ.
2023ರ ಮೇ 23ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು, 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದರು.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಶಾಂತಿ ಕಾಪಾಡುವಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಫಲ: ಕಾಂಗ್ರೆಸ್ ಟೀಕೆ
ಇದಾದ ಬಳಿಕ ಫೆಬ್ರವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. 2027ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ. ಆದರೆ ಇಂದಿಗೂ ಹಿಂಸಾಚಾರ ಸಂಪೂರ್ಣವಾಗಿ ನಿಂತಿಲ್ಲ. ಅಲ್ಲಲ್ಲಿ ಹಿಂಸಾಚಾರಗಳು ನಡೆಯುತ್ತಲೇ ಇವೆ.
ಮಣಿಪುರದ ಶಿರುಯಿ ಲಿಲಿ ಉತ್ಸವದ ವರದಿ ಮಾಡಲು ಉಖ್ರುಲ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಾಧ್ಯಮ ತಂಡವನ್ನು ಮಾರ್ಗಮಧ್ಯೆ ಭದ್ರತಾ ಸಿಬ್ಬಂದಿಗಳು ತಡೆದು ವಾಹನದಲ್ಲಿದ್ದ ‘ಮಣಿಪುರ ರಾಜ್ಯ ಸಾರಿಗೆ’ ಎಂಬ ಫಲಕವನ್ನು ಮರೆಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಿಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
