ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಹೈಕೋರ್ಟ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮತಗಟ್ಟೆಯ ಹೊರಗಿನಿಂದ ಐವರು ಕಾಂಗ್ರೆಸ್ ಬೆಂಬಲಿತ ಚುನಾಯಿತ ಜಿಲ್ಲಾ ಪಂಚಾಯತ್ ಸದಸ್ಯರನ್ನು ಹಾಡಹಗಲೇ ಅಪಹರಿಸಿದ ಘಟನೆ ಉತ್ತರಾಖಂಡದ ನೈನಿತಾಲ್ ಬೆಟ್ಟದ ಪಟ್ಟಣದಲ್ಲಿ ನಡೆದಿದೆ.
ಸಾರ್ವಜನಿಕರು ನೋಡನೋಡುತ್ತಿದ್ದಂತೆ ಅಪಹರಣ ನಡೆದಿದ್ದು, ಸದ್ಯ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ನಡುವೆ, “ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪಂಚಾಯತ್ ಸದಸ್ಯರನ್ನು ಅಪಹರಿಸುವ ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ” ಎಂದು ವಿರೋಧ ಪಕ್ಷ ಕಾಂಗ್ರೆಸ್ ನಾಯಕ ಯಶ್‌ಪಾಲ್ ಆರ್ಯ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ
ಈ ಬಗ್ಗೆ ಯಶ್‌ಪಾಲ್ ಆರ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಈ ವಿಷಯವನ್ನು ತುರ್ತಾಗಿ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಜಿ ನರೇಂದ್ರ ಮತ್ತು ನ್ಯಾಯಮೂರ್ತಿ ಅಲೋಕ್ ಮೆಹ್ರಾ ಅವರ ವಿಭಾಗೀಯ ಪೀಠವು ತನಿಖೆಗಾಗಿ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿತು. ಹಾಗೆಯೇ ಎಲ್ಲಾ ಹತ್ತು ಅಭ್ಯರ್ಥಿಗಳನ್ನು ಭದ್ರತೆಯಲ್ಲಿ ಮತಗಟ್ಟೆಗೆ ಕರೆದೊಯ್ಯುವಂತೆ ನಿರ್ದೇಶಿಸಿದೆ.
ಹಾಗೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಹರಿಸಿದ ಸದಸ್ಯರನ್ನು ಪತ್ತೆಹಚ್ಚಿ ಸಂಜೆ 4:30ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯವು ತಿಳಿಸಿದೆ. ಆದರೆ ಸದಸ್ಯರು ಪತ್ತೆಯಾಗಿಲ್ಲ.
ಅಪಹರಣಕ್ಕೊಳಗಾದ ಸದಸ್ಯರ ಕುಟುಂಬಗಳು ಪೊಲೀಸರು ತಮ್ಮ ದೂರುಗಳನ್ನು ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, “ಈ ರಾಜ್ಯದಲ್ಲಿ ಏನು ನಡೆಯುತ್ತಿದೆ? ಪೊಲೀಸರು ಕೆಲವರೊಂದಿಗೆ ಶಾಮೀಲಾಗಿದ್ದಾರೆ ಮತ್ತು ಎಸ್‌ಎಸ್‌ಪಿ ಕೂಡ ಭಾಗಿಯಾಗಿದ್ದಾರೆ ಎಂಬ ಗಂಭೀರ ಅನುಮಾನ ನಮಗಿದೆ” ಎಂದು ಟೀಕಿಸಿದರು.
ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆಗಸ್ಟ್ 18ರಂದು ವಿಚಾರಣೆ ಮುಂದುವರಿಯಲಿದೆ.
