ಶಾಸಕರಿಗೆ ₹50 ಕೋಟಿ | ವಿಶೇಷ ಅನುದಾನದ ಸುತ್ತ ಏಸೊಂದು ಅನುಮಾನಗಳ ಹುತ್ತ!

Date:

Advertisements
ರಾಜ್ಯದಲ್ಲಿ ಸಮರ್ಪಕವಾಗಿ ಅನುದಾನ ನೀಡದ ಕಾರಣಕ್ಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂಬ ಶಾಸಕರ ಆರೋಪದ ನಡುವೆ ಬೇರೆಯದ್ದೇ ವಾಸ್ತವ ಇದೆ. ಈಗ ವಿರೋಧ ಪಕ್ಷದ ಶಾಸಕರಿಗೆ ನೀಡಲಾಗುವ 25 ಕೋಟಿ ರೂ. ಮತ್ತು ಕಾಂಗ್ರೆಸ್‌ ಶಾಸಕರಿಗೆ ನೀಡುವ 50 ಕೋಟಿ ರೂ. ವಿಶೇಷ ಅನುದಾನ ಸೋರಿಕೆಯಾಗುವುದಿಲ್ಲ ಎನ್ನುವುದಕ್ಕೆ ಯಾವ 'ಗ್ಯಾರಂಟಿ'ಯೂ ಇಲ್ಲವಾಗಿದೆ.

ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಪಕ್ಷಾತೀತ ಶಾಸಕರ ಕೂಗಿಗೆ ಕೊನೆಗೂ ಸರ್ಕಾರ ಕಿವಿಯಾಗಿದೆ. ಬೆಂಗಳೂರಿನ 28 ಶಾಸಕರನ್ನು ಹೊರತುಪಡಿಸಿ ಉಳಿದ 196 ಶಾಸಕರಿಗೆ ಎರಡು ಹಂತಗಳಲ್ಲಿ ವಿಶೇಷ ಅನುದಾನ ಹಂಚಿಕೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ (ಈಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ -ಜಿಬಿಎ) ವಾರ್ಷಿಕವಾಗಿ 11 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುತ್ತಿರುವುದರಿಂದ ಬೆಂಗಳೂರು ವ್ಯಾಪ್ತಿಯ 28 ಶಾಸಕರನ್ನು ಕೈಬಿಟ್ಟು, 196 ಶಾಸಕರ ಪೈಕಿ ಪ್ರತಿಪಕ್ಷಗಳ 68 ಸದಸ್ಯರಿಗೆ ತಲಾ 25 ಕೋಟಿ ರೂ.ಗಳಂತೆ 1,700 ಕೋಟಿ ರೂ., ಕಲ್ಯಾಣ ಕರ್ನಾಟಕದ 27 ಶಾಸಕರಿಗೆ 25 ಕೋಟಿ ರೂ.ಗಳಂತೆ 675 ಕೋಟಿ ರೂ. ಹಾಗೂ ಉಳಿದ 101 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ.ಗಳಂತೆ 5,050 ಕೋಟಿ ರೂ. ಅನುದಾನ ಹಂಚಿಕೆಯಾಗಲಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸೂಕ್ತ ಅನುದಾನ ಸಿಗುತ್ತಿಲ್ಲ ಎಂದು ಇದೇ ಬಸವರಾಜ ರಾಯರೆಡ್ಡಿ ಆದಿಯಾಗಿ ರಾಜ್ಯ ನೀತಿ ಆಯೋಗ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಹಾಗೂ ಶಾಸಕ ರಾಜು ಕಾಗೆ ಸಹಿತ ಅನೇಕರು ಬಹಿರಂಗವಾಗಿ ತಮ್ಮದೇ ಸರ್ಕಾರದ ವಿರುದ್ಧ ಪದೇ ಪದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ವಾರಗಳ ಕಾಲ ರಾಜ್ಯದಲ್ಲಿ ಠಿಕಾಣಿ ಹೂಡಿ, ಕಾಂಗ್ರೆಸ್ ಶಾಸಕರ‌ ಜೊತೆ ಒನ್‌ ಟು ಒನ್‌ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕ ಮಂತ್ರಿಗಳು ಶಾಸಕರ ಮನವಿಗಳನ್ನು ಕಣ್ಣೆತ್ತಿಯೂ ನೋಡದ ಬಗ್ಗೆ ಸಾಕಷ್ಟು ದೂರುಗಳು ಶಾಸಕರಿಂದ ವ್ಯಕ್ತವಾಗಿದ್ದವು.

Advertisements

ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರ ಎದುರಿಸುವ ಸನ್ನಿವೇಶ ನಿರ್ಮಾಣವಾಗಿತ್ತು. ಅಲ್ಲದೇ ಆಗಸ್ಟ್ 11ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿರುವುದರಿಂದ ಕಲಾಪದ ವೇಳೆ ಶಾಸಕರ ಅಸಮಾಧಾನ ಸ್ಫೋಟಗೊಳ್ಳುವ ಆತಂಕವೂ ಇತ್ತು. ಈ ಎಲ್ಲ ಹಿನ್ನೆಲೆಗಳ ಪರಿಣಾಮವಾಗಿ ಶಾಸಕರ ಅಸಮಾಧಾನ ತಣಿಸಲು (ಮುಖ್ಯವಾಗಿ ಆಡಳಿತ ಪಕ್ಷದ ಶಾಸಕರ) ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿ ವಿಧಾನಸಭಾ ಸದಸ್ಯರ ಕ್ಷೇತ್ರಗಳಿಗೆ 50 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

siddaramaiah letter

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಣ ಬಿಡುಗಡೆ ಮಾಡಲು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡುವಂತೆ ಆಡಳಿತ ಪಕ್ಷದ ಎಲ್ಲ ಶಾಸಕರಿಗೆ ಖುದ್ದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಕುರಿತಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಯಿಂದಲೂ ಶಾಸಕರಿಗೆ ಸೂಚನಾ ಪತ್ರ ಕಳುಹಿಸಲಾಗಿದೆ. ಜು. 30ರಂದು ಕಲ್ಯಾಣ ಕರ್ನಾಟಕ, ಜು.31ರಂದು ಕಿತ್ತೂರು ಕರ್ನಾಟಕ ಹಾಗೂ ಆ. 3ರಂದು ಹಳೇ ಮೈಸೂರು ಭಾಗದ ಶಾಸಕರನ್ನು ಭೇಟಿ ಮಾಡಿ ವಿಶೇಷ ಅನುದಾನದ ಬಗ್ಗೆ ಸಿಎಂ ಚರ್ಚೆ ಮಾಡಲಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಈ ಮೂಲಕ ಮನವರಿಕೆ ಮಾಡಿಕೊಡಲಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್‌ ಮತ್ತು ತಮ್ಮ ನಡುವಿನ ಮುಸುಕಿನ ಗದ್ದುಗೆ ಗುದ್ದಾಟದಲ್ಲಿ ಶಾಸಕರ ಓಲೈಸಿಕೊಳ್ಳುವ ತಂತ್ರವೂ ಅಡಗಿದೆ ಎನ್ನಲಾಗಿದೆ.

ಗ್ಯಾರಂಟಿಗಳ ಹೊರೆ ಕಾರಣಕ್ಕೆ ಅಭಿವೃದ್ಧಿ ಅನುದಾನದ ವಿಚಾರದಲ್ಲಿ ಸಹಕಾರ ನೀಡಬೇಕು ಎಂದು ಶಾಸಕರಿಗೆ ಮುಖ್ಯಮಂತ್ರಿ ಅವರು ಸರ್ಕಾರ ರಚನೆ ಆರಂಭದಲ್ಲಿಯೇ ಮನವಿ ಮಾಡಿದ್ದರು. ಆದರೆ ಸರ್ಕಾರ ಎರಡು ವರ್ಷ ಪೂರೈಸಿ ಮುನ್ನಡೆಯುತ್ತಿದ್ದರೂ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುತರ ಅಭಿವೃದ್ಧಿ ಕಾರ್ಯಗಳು ಕಂಡುಬಂದಿರಲಿಲ್ಲ. ಕ್ಷೇತ್ರದ ಜನರಿಗೆ ಶಾಸಕರು ಮುಖ ತೋರಿಸುವುದೇ ಕಷ್ಟವಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ಹಂಚಿಕೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಈ ಬೆಳವಣಿಗೆ ಸುತ್ತ ಸಾಕಷ್ಟು ಪ್ರಶ್ನೆಗಳು ಮತ್ತು ಅನುಮಾನಗಳು ಹುಟ್ಟಿಕೊಂಡಿವೆ.

ಕಾಂಗ್ರೆಸ್ ಶಾಸಕರಿಗೆ ನೀಡುವ 50 ಕೋಟಿ ರೂ. ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯ ಕಾಮಗಾರಿ, ರಸ್ತೆ, ಸೇತುವೆ ಕಾಮಗಾರಿ ಸೇರಿ ಒಟ್ಟಾರೆ ಮೂಲ ಸೌಕರ್ಯ ಕಲ್ಪಿಸಲು 37.50 ಕೋಟಿ ರೂ. (ಶೇ.75) ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ. ಹಾಗೆಯೇ ಉಳಿದ 12.50 (ಶೇ.25) ಅನುದಾನವನ್ನು ಶಾಸಕರು ತಮ್ಮ ವಿವೇಚನಾಧಿಕಾರ ಬಳಸಿ ಕಾಮಗಾರಿಗಳಿಗೆ ವೆಚ್ಚ ಮಾಡಬಹುದು.

ರಾಜ್ಯ ಸರ್ಕಾರ 2025-26ನೇ ಸಾಲಿಗೆ ಮಂಡಿಸಿರುವ 4.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಗಳಿಗೆ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ 83 ಸಾವಿರ ಕೋಟಿ ರೂ. ಪ್ರತ್ಯೇಕ ಅನುದಾನ ತೆಗೆದಿಡಲಾಗಿದೆ. ಇಷ್ಟು ಹಣವನ್ನು ಹಿಂದಿನ ಯಾವ ಸರ್ಕಾರಗಳೂ ಮೀಸಲು ಇಟ್ಟಿರಲಿಲ್ಲ. ಈ ನಡುವೆ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ರೂ.ವರೆಗೂ ವಿಶೇಷ ಅನುದಾನ ನೀಡಲು 8 ಸಾವಿರ ಕೋಟಿ ರೂ. ಪ್ರತ್ಯೇಕ ಅನುದಾನ ಸಹ ಹಂಚಿಕೆಯಾಗುತ್ತಿದೆ.

ಪಿ
ಪಿ.ವಿ ನರಸಿಂಹ ರಾವ್

‘ವಿಶೇಷ ಅನುದಾನ’ ಎನ್ನುವ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದವರು ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್.‌ 1993-94ರಲ್ಲಿ ಮೊದಲ ಬಾರಿಗೆ ಸಂಸತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ಅನುದಾನವನ್ನು ಘೋಷಿಸಿದರು. ಇದು ಜಾರಿಯಾದಾಗ ಸಂಸದರ ಕ್ಷೇತ್ರಕ್ಕೆ 5 ಲಕ್ಷ ರೂ. ನಿಗದಿಯಾಗಿತ್ತು. ನಂತರ ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರದ ನಡೆಯನ್ನು ಅನುಸರಿಸಿಕೊಂಡು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಶೇಷ ಅನುದಾನ ನೀಡುತ್ತ ಬಂದಿವೆ.

ಸದ್ಯ ಸಂಸದರ ಕ್ಷೇತ್ರದ ಅಭಿವೃದ್ಧಿಗೆ ವಾರ್ಷಿಕವಾಗಿ 5 ಕೋಟಿ ರೂ. ಕೇಂದ್ರ ಸರ್ಕಾರ ಕೊಡುತ್ತಿದ್ದರೆ, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಪ್ರತಿಯೊಬ್ಬ ಸದಸ್ಯರಿಗೆ ವಾರ್ಷಿಕವಾಗಿ ತಲಾ 2 ಕೋಟಿ ರೂ. ಅನುದಾನವನ್ನು ಶಾಸಕರು, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡುತ್ತಿದೆ. ದೆಹಲಿಯಲ್ಲಿ ‘ಆಪ್‌’ ಸರ್ಕಾರ ಶಾಸಕರ ನಿಧಿಯನ್ನು 4 ಕೋಟಿ ರೂ.ಗಳಿಂದ 15 ಕೋಟಿ ರೂ. ವರೆಗೂ ಹೆಚ್ಚಿಸಿತ್ತು. ಆದರೆ, ಈಗೀನ ಬಿಜೆಪಿ ಸರ್ಕಾರ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ (ಎಲ್‌ಎಡಿ) ನಿಧಿಯಡಿ ದೆಹಲಿಯಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು 10 ಕೋಟಿ ರೂ. ಕಡಿತ ಮಾಡಿ, ವಾರ್ಷಿಕವಾಗಿ 5 ಕೋಟಿ ರೂ.ಗೆ ಕೊಡುತ್ತಿರುವುದನ್ನು ಇಲ್ಲಿ ಗಮನಿಸಬಹುದು.

ರಾಜ್ಯದಲ್ಲಿ ಸಮರ್ಪಕವಾಗಿ ಅನುದಾನ ನೀಡದ ಕಾರಣಕ್ಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂಬ ಶಾಸಕರ ಆರೋಪದ ನಡುವೆ ಬೇರೆಯದ್ದೇ ವಾಸ್ತವ ಕಾಣುತ್ತಿದೆ. 2024-25ನೇ ಸಾಲಿನಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಕೆಎಲ್‌ಎಲ್‌ಎಡಿಎಸ್‌) ನೀಡಲಾಗಿರುವ 1,479.85 ಕೋಟಿ ರೂ. ಅನುದಾನದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಬಳಕೆಯೇ ಆಗಿಲ್ಲ. ಇದರಿಂದ ಗೊತ್ತಾಗುತ್ತದೆ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ನಿಧಿ ಬಳಕೆಯಲ್ಲಿ ಆಸಕ್ತಿಯೇ ತೋರಿಲ್ಲ ಎಂಬುದು.

ಜಿಲ್ಲಾಧಿಕಾರಿಗಳಿಂದ ಸಿಗದ ಸೂಕ್ತ ಸ್ಪಂದನೆ

ಶಾಸಕರ ನಿಧಿ ಖರ್ಚಾಗದಿರಲು ಬೇರೆಯದ್ದೇ ಕಾರಣಗಳಿವೆ. ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗುವುದಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಅನುಮೋದನೆ ಮೇರೆಗೆ ಖಾತೆಯಿಂದ ಹಣ ಬಿಡುಗಡೆಯಾಗುತ್ತದೆ. ಈ ಅನುದಾನದ ಮೂಲಕ ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಸರಬರಾಜು, ಶಾಲಾ, ಕಾಲೇಜು ಕಟ್ಟಡ ನಿರ್ಮಾಣ, ಶೌಚಾಲಯ ನಿರ್ಮಾಣ, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಬಸ್ ನಿಲ್ದಾಣ, ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಹಲವು ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ.

ಆದರೆ, ಶಾಸಕರು ನೀಡಿರುವ ಕ್ರಿಯಾ ಯೋಜನೆಗಳಿಗೆ ಸಮಯಬದ್ಧವಾಗಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಅನುಮೋದನೆ ನೀಡದಿರುವುದು, ಆಡಳಿತಾತ್ಮಕ ಅನುಮೋದನೆ ನೀಡಿರುವ ಕಾಮಗಾರಿಗಳಿಗೆ ಶೇ. 40ರಷ್ಟು ಮುಂಗಡ ಅನುದಾನ ಸಂಬಂಧಿಸಿದ ಅನುಷ್ಠಾನ ಸಂಸ್ಥೆಗಳಿಗೆ ವರ್ಗಾಯಿಸದಿರುವುದು, ಆಡಳಿತಾತ್ಮಕ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನ ಇಲಾಖೆ, ಏಜೆನ್ಸಿಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಆರಂಭ ಮಾಡದೇ ಇರುವುದು, ಪೂರ್ಣಗೊಳಿಸಿದ ಕಾಮಗಾರಿಗಳಿಗೆ ಹಣ ಪಾವತಿ ಆಗದಿರುವುದರಿಂದ ಸಮರ್ಪಕವಾಗಿ ಶಾಸಕರ ನಿಧಿ ಖರ್ಚಾಗುತ್ತಿಲ್ಲ ಎನ್ನುವ ಆರೋಪ ಸಹ ಇದೆ. ಇದರ ನಡುವೆ ಮತ್ತೆ 50 ಕೋಟಿ ರೂ. ಹಣವೂ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಹಂಚಿಕೆಯಾಗಬೇಕಿದೆ.

ಕೆಂಪಣ್ಣ 4

ಅನುದಾನಕ್ಕಿಂತ ಕಮಿಷನ್ ಮುಖ್ಯ

ಸರ್ಕಾರ ನೀಡುವ ಅನುದಾನ ಬಳಕೆಯಾಗದಿರುವುದಕ್ಕೆ ಕಮಿಷನ್‌ ದಂಧೆ ಕೂಡ ಮತ್ತೊಂದು ಕಾರಣವಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘ ಶೇ.40 ಕಮಿಷನ್‌ ಆರೋಪ ಮಾಡಿತ್ತು. ಅದರ ಅಧ್ಯಕ್ಷರಾಗಿದ್ದ ದಿವಂಗತ ಡಿ. ಕೆಂಪಣ್ಣ ಅವರು ಸುದ್ದಿಗೋಷ್ಠಿ ಕರೆದು ಶೇ.40 ಕಮಿಷನ್‌ನಿಂದ ಗುಣಮಟ್ಟದ ಕಾಮಗಾರಿ ಅಸಾಧ್ಯ ಎಂದಿದ್ದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಕೆ.ಎಸ್‌ ಈಶ್ವರಪ್ಪ ವಿರುದ್ಧ ಬೆಳಗಾವಿಯ ಗುತ್ತಿಗೆದಾರ ಸಂತೋಷ ಎಂಬುವರು ಕಮಿಷನ್‌ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಮಿಷನ್‌ ದಂಧೆ ಕಾಂಗ್ರೆಸ್‌ ಸರ್ಕಾರದಲ್ಲೂ ಮುಂದುವರಿದಿದೆ. ವಾಲ್ಮೀಕಿ ನಿಗಮದ ಪ್ರಕರಣ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿದೆ.

ಕೋಟಿ ಕೋಟಿ ಖರ್ಚು ಮಾಡುವ ಅಭ್ಯರ್ಥಿಗಳಿಗಷ್ಟೇ ಆಯಾ ಪಕ್ಷಗಳು ಚುನಾವಣೆಯಲ್ಲಿ ಅಳೆದು ತೂಗಿ ಟಿಕೆಟ್‌ ನೀಡುತ್ತಿವೆ. ಕಾಂಗ್ರೆಸ್‌ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಅರ್ಜಿ ಪಡೆಯುವ ಅಭ್ಯರ್ಥಿಗಳಿಗೆ 2 ಲಕ್ಷ ರೂ. ನೀಡಲು ಸೂಚಿಸಿತ್ತು. ಇಲ್ಲಿಗೆ ಹಣ ಇದ್ದವರಷ್ಟೇ ಚುನಾವಣೆಗೆ ಅಭ್ಯರ್ಥಿಯಾಗಲು ಸಾಧ್ಯ ಎಂಬ ಸಂದೇಶ ಕಾಂಗ್ರೆಸ್‌ ರವಾನಿಸಿತ್ತು. ಬಿಜೆಪಿಯಲ್ಲೂ ಇದು ಹೊರತಾಗಿಲ್ಲ. ‘ಚುನಾವಣೆ ಬಾಂಡ್‌’ ಎಂಬ ಅಕ್ರಮದ ಬಿಜೆಪಿಗೆ ಅಂಟಿದೆ. ದೇಶದಲ್ಲಿ ತೆಲಂಗಾಣ ಮತ್ತು ಕರ್ನಾಟಕ ಚುನಾವಣೆ ಖರ್ಚಿನಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಹೀಗಿರುವಾಗ ಕೋಟಿ ಕೋಟಿ ಖರ್ಚು ಮಾಡಿ ಗೆದ್ದು ಬಂದ ಶಾಸಕರು ಖರ್ಚು ಮಾಡಿದ ಹಣವನ್ನು ಪಡೆಯುವುದೆಲ್ಲಿ? ಅದು ಕಾಮಗಾರಿಗಳ ಕಮಿಷನ್‌ ಮೂಲಕವೇ ಎಂಬುದು ರಾಜಕಾರಣದೊಳಗೆ ಒಪ್ಪಿತ ಸತ್ಯ. ಇಡೀ ರಾಜಕೀಯ ವ್ಯವಸ್ಥೆ ಹೇಗಿದೆ ಎಂದರೆ “ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆಯೇ!”

ಟಿ ಆರ್ ಚಂದ್ರಶೇಖರ್
ಅರ್ಥಶಾಸ್ತ್ರಜ್ಞ ಟಿ.ಆರ್‌. ಚಂದ್ರಶೇಖರ್‌

ಶಾಸಕರಿಗೆ ವಿಶೇಷ ಅನುದಾನ ಹಂಚಿಕೆ ಕುರಿತು ಈ ದಿನ.ಕಾಮ್‌ ಜೊತೆ ಅಭಿಪ್ರಾಯ ಹಂಚಿಕೊಂಡ ಆರ್ಥಿಕ ತಜ್ಞ ಡಾ. ಟಿ.ಆರ್‌ ಚಂದ್ರಶೇಖರ್‌, “ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರಿಗೆ ಹೀಗೆ ಕೋಟಿ ಕೋಟಿ ಅನುದಾನ ನೀಡುವುದು ವಿತ್ತಿಯ ಶಿಸ್ತಲ್ಲ. ಅಭಿವೃದ್ಧಿ ಯೋಜನೆಗಳ ಬಗ್ಗೆ ಯೋಜನೆ ರೂಪಿಸಲು ಯೋಜನಾ ಇಲಾಖೆಯೇ ಇದೆ. ಹಾಗಾದರೆ ಅದರ ಪ್ರಸ್ತುತತೆ ಏನು? ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರ ವಿಶೇಷ ಅನದಾನ ಹೇಗೆ ಪೂರಕವಾಗಿರಲಿದೆ? ಶಾಸಕರು ಬರೀ ಕಟ್ಟಡ ಕಟ್ಟುವುದು, ಆ ಮೂಲಕ ಕಮಿಷನ್‌ ಹೊಡೆಯುವುದು ಇಷ್ಟೇ ಇವರ ಕೆಲಸ. ಉಳಿದಂತೆ ಹೇಗೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಾರೆ? ನನ್ನ ಪ್ರಕಾರ ಇದು ಶಾಸಕರ ಅಸಮಾಧಾನ ತಣಿಸಲು ಹೂಡಿರುವ ಉಪಾಯ ಅಷ್ಟೇ” ಎಂದು ವಿಶ್ಲೇಷಿಸಿದರು.

ಒಟ್ಟಾರೆ ವಿರೋಧ ಪಕ್ಷದ ಶಾಸಕರಿಗೆ ನೀಡಲಾಗುವ 25 ಕೋಟಿ ರೂ. ಮತ್ತು ಕಾಂಗ್ರೆಸ್‌ ಶಾಸಕರಿಗೆ ನೀಡುವ 50 ಕೋಟಿ ರೂ. ಸೋರಿಕೆಯಾಗುವುದಿಲ್ಲ ಎನ್ನುವುದಕ್ಕೆ ಯಾವ ‘ಗ್ಯಾರಂಟಿ’ಯೂ ಇಲ್ಲವಾಗಿದೆ. ಅಭಿವೃದ್ಧಿ ಹೆಸರನ್ನು ಮುಂದು ಮಾಡಿ ಕೊಳ್ಳೆ ಹೊಡೆಯುವ ತಂತ್ರ ಎನ್ನುವ ಆರೋಪಗಳು ಹೆಚ್ಚು ಕೇಳಿಬರುತ್ತಿವೆ. ವಿತ್ತಿಯ ಶಿಸ್ತನ್ನು ಬಲ್ಲ ಸಿದ್ದರಾಮಯ್ಯ ಅವರೇ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದರೆ, ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ ಎಂಬ ವಿಶ್ಲೇಷಣೆಗಳು ಸಹ ನಡೆಯುತ್ತಿವೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X