ಸಂಸತ್ತಿನ ಉಭಯ ಸದನಗಳಲ್ಲಿ ‘ವಕ್ಫ್ ತಿದ್ದುಪಡಿ ಮಸೂದೆ-2024’ ಅಂಗೀಕಾರಗೊಂಡ ಕೆಲವೇ ಗಂಟೆಗಳಲ್ಲಿ ಕೇರಳದಲ್ಲಿ ಸುಮಾರು 50 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರೆಲ್ಲರೂ ವಕ್ಫ್ ಬೋರ್ಡ್ ಜೊತೆಗಿನ ಭೂ ವಿವಾದದಲ್ಲಿ ಸಿಲುಕಿಕೊಂಡಿರುವವರು ಎಂದು ವರದಿಯಾಗಿದೆ.
ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಸಮ್ಮುಖದಲ್ಲಿ ಹಲವರು ಬಿಜೆಪಿ ಸೇರಿದ್ದಾರೆ. ‘ಈ ಎಲ್ಲರೂ ತಮ್ಮದು ಎಂದು ವಾದಿಸುತ್ತಿರುವ ಭೂಮಿಯನ್ನು ವಕ್ಫ್ ಬೋರ್ಡ್‌ನಿಂದ ಪಡೆದುಕೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನೆರವು ನೀಡಲಿದೆ’ ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯವಾಗಿ ಕೇರಳದ ಕೊಚ್ಚಿಯಲ್ಲಿರುವ ಮುನಂಬಮ್ ಪ್ರದೇಶದ ಹಲವಾರು ನಿವಾಸಿಗಳು ಬಿಜೆಪಿ ಸೇರಿದ್ದಾರೆ. ಅವರೆಲ್ಲರೂ ವಕ್ಫ್ ಮಂಡಳಿಯ ಸುಪರ್ದಿಯಲ್ಲಿರುವ ಭೂಮಿಯ ಮೇಲೆ ತಮ್ಮ ಆಸ್ತಿ ಹಕ್ಕು ಪಡೆಯಲು ಕಳೆದ ಆರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ಕ್ಯಾಥೋಲಿಕ್ ಚರ್ಚ್ ಬೆಂಬಲವಾಗಿ ನಿಂತಿದೆ ಎಂದು ವರದಿಯಾಗಿದೆ.
ಇದೀಗ, ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಿರುವುದರಿಂದ, ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ, ವಕ್ಫ್ ಮಂಡಳಿ ಹಕ್ಕು ಹೊಂದಿರುವ ತಮ್ಮ ಭೂಮಿಯ ವಿವಾದ ಇತ್ಯರ್ಥವಾಗುತ್ತದೆ. ತಮ್ಮ ಭೂಮಿ ತಮಗೆ ಮರಳಿ ದೊರೆಯುತ್ತಿದೆ ಎಂದು ನಂಬಿದ್ದಾರೆ.
“ವಕ್ಫ್ ಮಂಡಳಿ ಜೊತೆಗೆ ಭೂ ವಿವಾದ ಹೊಂದಿರುವವರ ಅಳಲು ಆಲಿಸುವಲ್ಲಿ ಕೇರಳದ ಚುನಾಯಿತ ಸರ್ಕಾರ ನಿರ್ಲಕ್ಷ್ಯ ಧೋರಣೆ ಹೊಂದಿದೆ. ಈ ಸಂತ್ರಸ್ತರ ಸಮಸ್ಯೆ ಪರಿಹರಿಸಿ, ಉತ್ತಮ ಭವಿಷ್ಯ ಒದಗಿಸಲು ಕೆಲವ ಮಾಡುವ ಅವಕಾಶ ನಮಗೆ ದೊರೆತಿದೆ” ಎಂದು ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಹೇಳಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿದೆ. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದೂ ಅವರು ಭರವಸೆ ನೀಡಿದ್ದಾರೆ.
“ವಕ್ಫ್ ಮಸೂದೆ ಅಂಗೀಕಾರ ಆಗಿರುವುದರಿಂದ ಮುನಂಬಮ್ ಜನರ ಸಮಸ್ಯೆಗೆ ಪರಿಹಾರ ದೊರೆಯುವುದೇ. ಅವರ ಸಮಸ್ಯೆಯನ್ನು ಬಗೆಹರಿಸಿ, ಪರಿಹಾರ ಒದಗಿಸುತ್ತೇವೆಂದು ಬಿಜೆಪಿ ಯಾವೊಬ್ಬ ನಾಯಕರೂ ಹೇಳಿಲ್ಲ” ಎಂದು ವಿಪಕ್ಷ ನಾಯಕ ವಿ.ಡಿ. ಸತೀಶನ್ ಪ್ರಶ್ನಿಸಿದ್ದಾರೆ.