ವಾಣಿಜ್ಯ ಸಂಸ್ಥೆಗಳು ಸೂಚನಾ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕೆಂದು ಕಡ್ಡಾಯಗೊಳಿಸುವ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ. ಆದರೆ, ಮಸೂದೆ ಅಂಗೀಕಾರಕ್ಕಾಗಿ ರಾಜ್ಯ ವಿಧಾನಮಂಡಲದಲ್ಲಿ ಮಂಡಿಸುವಂತೆ ಸಲಹೆ ನೀಡಿ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ ಎಂದು ರಾಜಭವನ ಬುಧವಾರ ಹೇಳಿದೆ.
“ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿಲ್ಲ. ಆದರೆ, ಉಭಯ ಸದನಗಳನ್ನು ಫೆಬ್ರವರಿ 12ರಿಂದ ಕರೆಯುವ ಅಧಿಸೂಚನೆ ಹೊರಡಿಲಾಗಿದೆ. ಹೀಗಾಗಿ, ಸದನಗಳಲ್ಲಿ ಅನುಮೋದನೆಗಾಗಿ ಮಸೂದೆಯನ್ನು ಮಂಡಿಸಲು ಸಲಹೆ ನೀಡಿ, ಹಿಂದಿರುಗಿಸಲಾಗಿದೆ” ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಹೇಳಿದ್ದಾರೆ.
“ಕನ್ನಡಿಗರಿಗೆ ಭಾಷೆ ಭಾವನಾತ್ಮಕ ವಿಷಯ. ನಾಗರಿಕರು ಅಥವಾ ಯಾವುದೇ ರಾಜಕೀಯ ಪಕ್ಷಗಳು ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದ್ದರಿಂದ ಮತ್ತೊಮ್ಮೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
“ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಏಕೆ ಹಿಂದಕ್ಕೆ ಕಳುಹಿಸಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ವಿಧಾನಸಭೆ ಅಧಿವೇಶನಕ್ಕೆ ಕಾಯದೆ ರಾಜ್ಯಪಾಲರು ಅಂಕಿತ ಹಾಕಬೇಕಿತ್ತು,” ಎಂದು ಶಿವಕುಮಾರ್ ಹೇಳಿದ್ದಾರೆ.
“ಕನ್ನಡ, ಸಂಸ್ಕೃತಿ, ಅಭಿಮಾನದ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧಾರಿಸಲಾಗಿದೆ. ಕನ್ನಡ ಪರ ಹೋರಾಟಗಾರರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಸುಗ್ರೀವಾಜ್ಞೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ” ಎಂದು ಅವರು ತಿಳಿಸಿದ್ದಾರೆ.
“ಸುಗ್ರೀವಾಜ್ಞೆ ತಿರಸ್ಕೃತಗೊಂಡಿರುವ ಕಾರಣ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡಿಸಲು ನಿರ್ಧರಿಸಿದ್ದೇವೆ. ಇನ್ನು 10-15 ದಿನಗಳಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ಮಸೂದೆ ಮಂಡನೆಯಾಗಲಿದೆ” ಎಂದು ಅವರು ಹೇಳಿದ್ದಾರೆ.
“ಅಧಿವೇಶನ ದಿನಾಂಕ ನಿಗದಿಯಾಗಿರುವುದರಿಂದ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ. ಅಧಿವೇಶನದ ದಿನಾಂಕ ನಿಗದಿಯಾಗುವುದಕ್ಕೂ ಮೊದಲೇ ಅವರಿಗೆ ಸುಗ್ರೀವಾಜ್ಞೆಯ ಪ್ರತಿ ಕಳಿಸಿದ್ದೆವು. ಆದರೆ, ರಾಜ್ಯಪಾಲರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಬೆಂಗಳೂರಿನಿಂದ ಹೊರಗಿದ್ದರು. ಹೀಗಾಗಿ, ಸಹಿ ಹಾಕುವಲ್ಲಿ ವಿಳಂಬವಾಗಿದೆ. ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ” ಎಂದು ಸಚಿವ ಶವರಾಜ್ ತಂಗಡಗಿ ಹೇಳಿದ್ದಾರೆ.