ರಾಜ್ಯದಲ್ಲಿ ಮಳೆ ಕೊರತೆಯ ನಡುವೆಯು 75% ಬಿತ್ತನೆಯಾಗಿದೆ. ಒಟ್ಟು 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿತ್ತು. ಈ ಪೈಕಿ, 61.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
“ಜೂನ್ 1ರಿಂದ ಆಗಸ್ಟ್ ಎರಡನೇ ವಾರದವರೆಗೆ ರಾಜ್ಯದಲ್ಲಿ 472 ಮಿ.ಮೀ ಮಳೆಯಾಗಿದೆ. ಮಳೆ ಕೊರತೆಯಿಂದ ಬಿತ್ತನೆಯ ಗುರಿ ಮುಟ್ಟಲು ಸಾಧ್ಯವಾಗಿಲ್ಲ” ಎಂದು ಅವರು ಹೇಳಿದ್ದಾರೆ.
“ಈ ತಿಂಗಳು ರಾಜ್ಯಾದ್ಯಂತ ಎಲ್ಲಿಯೂ ಸರಿಯಾದ ಮಳೆಯಾಗಿಲ್ಲ. ಮುಂದಿನ ವಾರವೂ ಮಳೆಯಾಗದಿದ್ದರೆ, ಬೆಳೆಗಳು ಒಣಗುತ್ತವೆ. ಬೆಳೆದಿರುವ ಬೆಳೆಗೆ ಮಳೆಯ ಅಗತ್ಯವಿದೆ” ಎಂದು ಹೇಳಿದ್ದಾರೆ.
“ಬರ ಘೋಷಣೆ ಮಾಡುವ ಬಗ್ಗೆ ಮಾಹಿತಿ ಪಡೆದು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ. ಮೋಡ ಬಿತ್ತನೆ ಬಗ್ಗೆಯೂ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.