ಪಶ್ಚಿಮ ಬಂಗಾಳದ ಒಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಏಳನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದ್ದು, ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ. ಕೋಲ್ಕತ್ತಾ ಬಳಿಯ ಜಾದವ್‌ಪುರ ಕ್ಷೇತ್ರದ ಭಾಂಗಾರ್‌ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಮತ್ತು ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಐಎಸ್‌ಎಫ್ ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯಲ್ಲಿ ಕೆಲವು ಮತಗಟ್ಟೆ ಏಜೆಂಟರನ್ನು ಬೂತ್‌ಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದ್ದು, ಕೋಪಗೊಂಡ ಗುಂಪೊಂದು ಮತಗಟ್ಟೆಗಳಿಗೆ ನುಗ್ಗಿ, ಇವಿಎಂಗಳನ್ನು ಹೊತ್ತೊಯ್ದು ಕೆರೆಗೆ ಎಸೆದಿದೆ.
“ಬೇನಿಮಾಧವಪುರ ಎಫ್‌ಪಿ ಶಾಲೆಯ ಬಳಿ ಇವಿಎಂಗಳು ಮತ್ತು ಪೇಪರ್‌ಗಳನ್ನು ಸ್ಥಳೀಯ ಗುಂಪು ಹೊತ್ತೊಯ್ದು ಹಾನಿ ಮಾಡಿದೆ. ಶುಕ್ರವಾರ ತಡರಾತ್ರಿ ಬಸಿರ್‌ಹತ್ ಲೋಕಸಭೆ ವ್ಯಾಪ್ತಿಯ ಸಂದೇಶ್‌ಖಾಲಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಸ್ಥಳೀಯ ಮಹಿಳೆಯರು, ಬಿದಿರಿನ ಕೋಲುಗಳೊಂದಿಗೆ ಶಸ್ತ್ರಸಜ್ಜಿತರಾಗಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಸ್ಥಳೀಯ ಬಿಜೆಪಿ ಬೆಂಬಲಿಗರು ನಾಗರಿಕ ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
West Bengal: EVM machine was seen floating in water during voting in South 24 Parganas. pic.twitter.com/HInj1D7gLe
— IANS (@ians_india) June 1, 2024
ಜಾದವ್‌ಪುರದ ಗಂಗೂಲಿ ಬಗಾನ್‌ನಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಟ್ಖೋಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿವೆ. ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಮಾಧ್ಯಮದ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.