ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಾಧ್ಯಕ್ಷ, ತೆಲಂಗಾಣ ಮಾಜಿ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಹರೀಶ್ ರಾವ್ ಮತ್ತು ಇತರ ಆರು ಮಂದಿ ಬಿಆರ್ಎಸ್ ನಾಯಕರನ್ನು ಮಂಗಳವಾರ ಬೆಳಿಗ್ಗೆ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಪಕ್ಷ ತಿಳಿಸಿದೆ.
ಫಾರ್ಮುಲಾ ಇ ರೇಸ್ ಪ್ರಕರಣದ ತನಿಖೆ ನಡೆಸುತ್ತಿರುವ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಪ್ರಕರಣದಲ್ಲಿ ಬಿಆರ್ಎಸ್ ನಾಯಕರ ಪಾತ್ರವಿದೆ ಎಂದು ಆರೋಪಿಸಿದೆ. ಆದರೆ, ಆರೋಪವನ್ನು ಬಿಆರ್ಎಸ್ ನಾಯಕರು ನಿರಾಕರಿಸಿದ್ದಾರೆ. ಆರೋಪವು ‘ಕ್ಷುಲ್ಲಕ’ ಮತ್ತು ‘ಕಾನೂನು ಪ್ರಕ್ರಿಯೆಯ ದುರುಪಯೋಗ’ ಎಂದು ಕೆಟಿಆರ್ ಕರೆದಿದ್ದಾರೆ.
ಈ ನಡುವೆ, ಸೋಮವಾರ, ಬಿಆರ್ಎಸ್ ಶಾಸಕ ಪಾಡಿ ಕೌಶಿಕ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ, ಹೈದರಾಬಾದ್ನ ಗಚಿಬೌಲಿಯಲ್ಲಿರುವ ಕೆಟಿಆರ್ ಅವರ ನಿವಾಸದ ಹೊರಗೆ ಭಾರೀ ಪೊಲೀಸರನ್ನು ನಿಯೋಜಿಸಲಾಗಿದ್ದು, ಕೆಟಿಆರ್ ಅವರನ್ನು ಮನೆಯಲ್ಲಿಯೇ ಬಂಧನದಲ್ಲಿರಿಸಲಾಗಿದೆ.
ಫಾರ್ಮುಲಾ-ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 9ರಂದು ಎಸಿಬಿ ಮುಂದೆ ಕೆಟಿಆರ್ ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಮಾತನಾಡಿದ್ದ ಕೆಟಿಆರ್, “ಆರೋಪಗಳಿಗೆ ಯಾವುದೇ ಗಣನೀಯ ಪುರಾವೆಗಳಿಲ್ಲ. ಆದರೂ, ಏಳು ಗಂಟೆಗಳಿಗೂ ಹೆಚ್ಚು ಕಾಲ ನನ್ನನ್ನು ಪುನರಾವರ್ತಿತ ಪ್ರಶ್ನೆಗಳನ್ನು ಪದೇ ಪದೇ ಕೇಳಲಾಗಿದೆ” ಎಂದು ಹೇಳಿಕೊಂಡಿದ್ದರು.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ‘ಕ್ಷುಲ್ಲಕ’ ಮತ್ತು ‘ಕಾನೂನುಬಾಹಿರ’ವಾಗಿವೆ. ರಾಜ್ಯ ಸರ್ಕಾರದ ವಿರುದ್ಧ ಬಿಆರ್ಎಸ್ ಹೋರಾಡುತ್ತಿದ್ದು, ಕಾರಣಕ್ಕಾಗಿ ತಮ್ಮ ಮೇಲೆ ಇಂತಹ ಆರೋಪ ಹೊರಿಸಲಾಗಿದೆ ಎಂದು ಕೆಟಿಆರ್ ಪ್ರತಿಪಾದಿಸಿದ್ದರು.
ಈ ವರದಿ ಓದಿದ್ದೀರಾ?: 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು
“ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ ಎಂದು ನಾನು ಅವರನ್ನು (ಎಸಿಬಿ) ಕೇಳಿದೆ. ಹೈದರಾಬಾದ್ ಮತ್ತು ತೆಲಂಗಾಣವನ್ನು ವಿಶ್ವ ವೇದಿಕೆಯಲ್ಲಿ ಇರಿಸಲು ನಾನು ಸಚಿವನಾಗಿ ಏನು ಮಾಡಿದ್ದೇನೆಯೋ ಅದನ್ನು ಪೂರ್ಣ ಪ್ರಜ್ಞೆಯಿಂದ ಮಾಡಿದ್ದೇನೆ. ನೀವು ನನ್ನ ಮೇಲೆ ಆರೋಪ ಮಾಡಿ ಪ್ರಕರಣವನ್ನು ಹೇರಲು ಮುಂದಾದರೆ, ಅದು ಬಹುಶಃ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಸಂತೋಷವಾಗಬಹುದು. ಹೊರತಾಗಿ, ಬೇರೇನು ಅಗದು” ಎಂದು ಕೆಟಿಆರ್ ಹೇಳಿದ್ದಾರೆ.
“ರಾಜಕೀಯ ವಿರೋಧವನ್ನು ನಿಗ್ರಹಿಸಲು ಸರ್ಕಾರವು ಆರೋಪ-ಪ್ರಕರಣವನ್ನು ಸಾಧನವಾಗಿ ಬಳಸುತ್ತಿದೆ. ನಾನು ಕಾನೂನುಬದ್ಧವಾಗಿ ಹೋರಾಡುತ್ತೇನೆ. ನಾನು ಎಲ್ಲ ರೀತಿಯ ಕಾನೂನು ಪರಿಹಾರಗಳನ್ನು ಹುಡುಕುತ್ತೇನೆ. ಸತ್ಯ ಹೊರ ಬರುತ್ತದೆ. ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಈ ನಡುವೆ, ತಮ್ಮ ವಿರುದ್ಧ ದಾಖಲಾಗಿರುವ ಫಾರ್ಮುಲಾ ಇ ರೇಸ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೆಟಿಆರ್ ಸಲ್ಲಿಸಿದ್ದ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
2023ರ ಫೆಬ್ರವರಿಯಲ್ಲಿ ಹೈದರಾಬಾದ್ನಲ್ಲಿ ನಡೆದ ಫಾರ್ಮುಲಾ ಇ ರೇಸ್ಗೆ ಸಂಬಂಧಿಸಿದಂತೆ ಹಣಕಾಸು ಅಕ್ರಮಗಳು ನಡೆದಿವೆ. ಕೆಟಿಆರ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ತೆಲಂಗಾಣದ ಎಸಿಬಿ ತನಿಖೆ ನಡೆಸುತ್ತಿದೆ.