10 ಚದರ ಅಡಿ ರೂಮ್‌ನಲ್ಲಿ 80 ಮಂದಿ ವಾಸ; ಗ್ರೌಂಡ್‌ ರಿಪೋರ್ಟ್‌ ಬಿಚ್ಚಿಟ್ಟ ಮತ ಕಳ್ಳತನದ ಗಂಭೀರ ಸಂಗತಿ!

Date:

Advertisements

2024ರ ಲೋಕಸಭಾ ಚುನಾವಣೆಯಲ್ಲಿ 70-100 ಕ್ಷೇತ್ರಗಳಲ್ಲಿ ಮತ ಕಳ್ಳತನ ನಡೆದಿದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮತದಾರರನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅದಕ್ಕೆ ಪೂರಕವಾದ ಸತ್ಯಶೋಧನಾ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಮುಖ್ಯವಾಗಿ – 10 ಚದರ ಅಡಿ ವಿಸ್ತೀರ್ಣದ ರೂಮ್‌ನ ವಿಳಾಸದಲ್ಲಿ 80 ಮತದಾರರ ನೋಂದಣಿಯಾಗಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ.

ಈ ಆರೋಪವನ್ನು ಪರಿಶೀಲಿಸಲು ಹಲವಾರು ಮಾಧ್ಯಮಗಳು ಮಹದೇವಪುರದಲ್ಲಿ ಗ್ರೌಂಡ್‌ ರಿಪೋರ್ಟ್‌ ಮಾಡಿವೆ. ಅಂತೆಯೇ ಇಂಗ್ಲಿಷ್‌ ಸುದ್ದಿಸಂಸ್ಥೆ ‘ದಿ ನ್ಯೂಸ್‌ ಮಿನಿಟ್’ ಕೂಡ ಗ್ರೌಂಡ್‌ ರಿಪೋರ್ಟ್‌ ಮಾಡಿದ್ದು, ರಾಹುಲ್‌ ಗಾಂಧಿ ಉಲ್ಲೇಖಿಸಿದ್ದ ಮಹದೇವಪುರದ ಮುನಿರೆಡ್ಡಿ ಲೇಔಟ್‌ನ ವಿಳಾಸಕ್ಕೆ ಭೇಟಿ ನೀಡಿ, ಪರಿಶೀಲಿಸಿದೆ. ಆ ರೂಮ್‌ನಲ್ಲಿ ವಾಸಿಸುತ್ತಿರುವ ನಿತೀಶ್‌ ಮೊಂಡಲ್ ಅವರನ್ನು ಮಾತನಾಡಿಸಿದೆ. ”ನಾನು ಇಲ್ಲಿ 36 ವರ್ಷಗಳಿಂದ ವಾಸಿಸುತ್ತಿದ್ದೇನೆ. ಈ ಮತದಾರ ಪಟ್ಟಿಯಲ್ಲಿ ಇರುವ ಒಂದೇ ಒಂದು ಹೆಸರನ್ನೂ ನಾನು ಗುರುತಿಸಲು ಸಾಧ್ಯವಿಲ್ಲ. ಈ ಹೆಸರಿನ ಯಾರೂ ಇಲ್ಲಿ ಇರಲಿಲ್ಲ” ಎಂದು ಹೇಳಿದ್ದಾರೆ.

ಮುನಿರೆಡ್ಡಿ ಲೇಔಟ್‌ ಸುಮಾರು 35 ಸಣ್ಣ ಕೋಣೆಗಳನ್ನು ಹೊಂದಿರುವ ದಟ್ಟವಾದ ಬಡಾವಣೆಯಾಗಿದೆ. ಅಲ್ಲಿನ ಪ್ರತಿಯೊಂದು ಕೋಣೆಯು ಕೇವಲ 10 ರಿಂದ 15 ಚದರ ಅಡಿಗಳಷ್ಟು ವಿಸ್ತೀರ್ಣದ್ದಾಗಿವೆ. ಈ ರೂಮ್‌ಗಳಲ್ಲಿ ಸಾಮಾನ್ಯವಾಗಿ ಮೂವರಿಗಿಂತ ಹೆಚ್ಚಿನ ಜನರು ವಾಸಿಸುವುದಿಲ್ಲ. ಹೆಚ್ಚು ಮಂದಿ ವಾಸಿಸಲು ಸಾಧ್ಯವೂ ಇಲ್ಲ.

Advertisements

ರಾಹುಲ್ ಗಾಂಧಿ ಅವರು ಮುನಿರೆಡ್ಡಿ ಲೇಔಟ್‌ನ ರೂಮ್‌ ನಂಬರ್ 35ಅನ್ನು ಉಲ್ಲೇಖಿಸಿದ್ದರು. ಅಲ್ಲಿ, 80 ಮಂದಿ ಮತದಾರರು ನೋಂದಾಯಿತರಾಗಿದ್ದಾರೆ ಎಂದು ಹೇಳಿದ್ದರು. ಆ ಕೋಣೆಯಲ್ಲಿ ಪ್ರಸ್ತುತ ದೀಪಂಕರ್ ಎಂಬ ಫುಡ್ ಡೆಲಿವರಿ ಕೆಲಸಗಾರರೊಬ್ಬರು ವಾಸವಾಗಿದ್ದಾರೆ. ಅವರು ಪಶ್ಚಿಮ ಬಂಗಾಳದವರಾಗಿದ್ದು, ಒಂದು ತಿಂಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದ್ದಾರೆ. ಅವರ ಕೋಣೆಯಲ್ಲಿ ಒಂದು ಹಾಸಿಗೆ ಮತ್ತು ಕೆಲವು ಪಾತ್ರೆಗಳಷ್ಟೇ ಇವೆ.

”ನಾನು ಇಲ್ಲಿ ಕೇವಲ ಒಂದು ತಿಂಗಳಿಂದ ವಾಸಿಸುತ್ತಿದ್ದೇನೆ. ನಿನ್ನೆಯಿಂದ ಇಲ್ಲಿ ಗದ್ದಲ ಶುರುವಾಗಿದೆ. ಹಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನನಗೆ ಏನಾಗುತ್ತಿದೆ ಎಂಬುದೇ ಗೊತ್ತಿಲ್ಲ. ನಾನು ಬೆಂಗಳೂರಿನ ಮತದಾರನೂ ಅಲ್ಲ. ಇಲ್ಲಿ, ನನ್ನ ಮತದಾರ ಗುರುತಿನ ನೋಂದಣಿ ಅಥವಾ ಚೀಟಿಯನ್ನು ಹೊಂದಿಲ್ಲ. ಇದಕ್ಕೂ ಮೊದಲು ಯಾರು ಇಲ್ಲಿ ವಾಸಿಸುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ. ನಾನು ಇಲ್ಲಿಗೆ ಬಂದಾಗ ರೂಮ್ ಖಾಲಿ ಇತ್ತು” ಎಂದು ಹೇಳಿಕೊಂಡಿದ್ದಾರೆ.

ಅದರ ಪಕ್ಕದ ರೂಮ್‌ ಸಂಖ್ಯೆ 34ರಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ನಿತೀಶ್ ಮೊಂಡಲ್ ಅವರಿಗೆ ಆ ಪ್ರದೇಶದಲ್ಲಿ ನೋಂದಣಿಯಾಗಿರುವ ಮತದಾರರ ಪಟ್ಟಿಯನ್ನು ‘TNM’ ತೋರಿಸಿದೆ. ಅವುಗಳನ್ನು ಗಮನಿಸಿದ ನಿತೀಶ್, ”ಈ ಹೆಸರಿನ ಯಾರನ್ನೂ ನಮ್ಮ ನೆರೆಹೊರೆಯಲ್ಲಿ ನಾನು ನೋಡಿಲ್ಲ. ಇಲ್ಲಿರುವ ಬಹುಸಂಖ್ಯಾತರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮೂಲದವರು. ನಾವ್ಯಾರೂ, ಕರ್ನಾಟಕದಲ್ಲಿ ಮತದಾನ ಮಾಡುವ ಹಕ್ಕು ಹೊಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲಿಯೇ ಇದ್ದ ಅರುಣಾ ಎಂಬ ಮಹಿಳೆ, ರೂಮ್‌ ನಂಬರ್ 35ರಲ್ಲಿ 80 ಮಂದಿ ಮತದಾರರು ನೋಂದಾಯಿತರಾಗಿದ್ದಾರೆ ಎಂಬ ವಿಚಾರ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾರೆ. ”ಇಲ್ಲಿರುವ ನಾವೆಲ್ಲರೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಬಂದವರು. ನಾವು ಇಲ್ಲಿ ಮತ ಚಲಾಯಿಸುವುದಿಲ್ಲ. ಮತದಾರರ ಪಟ್ಟಿಯಲ್ಲಿರುವ ಹೆಸರಿನ ಯಾರನ್ನೂ ನಾವು ನೋಡಿಲ್ಲ” ಎಂದಿದ್ದಾರೆ.

ಇನ್ನು, ಆ ರೂಮ್‌ಗಳ ಮಾಲೀಕ ಜೈರಾಮ್ ರೆಡ್ಡಿ, ಅವರು ಬಿಜೆಪಿ ಜೊತೆಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಬಳಿಕ, ತಾವು ಬಿಜೆಪಿಗೆ ಮತಹಾಕುವ ಬೆಂಬಲಿಗ ಮಾತ್ರವೆಂದು ತಮ್ಮ ಮಾತನ್ನು ಬದಲಿಸಿದರು.

ಈ ಲೇಖನ ಓದಿದ್ದೀರಾ?: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತ ಕಳವು: ಚುನಾವಣಾ ಆಯೋಗವೇ ನೇರ ಬೆಂಬಲ ನೀಡಿತೆ?  

ಆದಾಗ್ಯೂ, ತಮ್ಮ ಕಟ್ಟಡದ ರೂಮ್‌ ನಂಬರ್ 35ರಲ್ಲಿ 80 ಮಂದಿ ವಾಸಿಸುತ್ತಿದ್ದರು ಎಂಬ ಆರೋಪವನ್ನು ಸಂಪೂರ್ಣವಾಗಿ ಅವರು ತಳ್ಳಿ ಹಾಕಿದ್ದಾರೆ. ”ಕೋವಿಡ್-19ಗೂ ಮುಂಚೆ, ಇಲ್ಲಿನ ಯಾರಿಗೂ ಕರ್ನಾಟಕದಲ್ಲಿ ಮತದಾನ ಮಾಡುವ ಹಕ್ಕು ಇರಲಿಲ್ಲ. ಇಲ್ಲಿಗೆ ಬಾಡಿಗೆಗೆ ಬರುವ ಜನರು ಒಂದೆರಡು ತಿಂಗಳು ಅಥವಾ ಒಂದು ವರ್ಷ ವಾಸಿಸಿ, ಖಾಲಿ ಮಾಡಿಕೊಂಡು ಹೋಗುತ್ತಾರೆ. ನನ್ನ ಕಟ್ಟಡದಲ್ಲಿ 80 ಮತದಾರರು ಇದ್ದಾರೆಂಬುದು ನಮಗೂ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಅವರಿಗೂ ಕೂಡ ಮತದಾರರ ಪಟ್ಟಿಯನ್ನು ತೋರಿಸಲಾಗಿದ್ದು, ಅದರಲ್ಲಿದ್ದ ಯಾವುದೇ ಹೆಸರುಗಳು ಅಥವಾ ಚಿತ್ರಗಳನ್ನು ಅವರು ಗುರುತಿಸಲಿಲ್ಲ.

ರಾಹುಲ್ ಗಾಂಧಿಯವರ ಆರೋಪವು; ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಮಹದೇವಪುರದಲ್ಲಿ ದೊಡ್ಡ ಪ್ರಮಾಣದ ಮತದಾನ ದುರುಪಯೋಗ ನಡೆದಿದ್ದು, ಇದಕ್ಕೆ ಚುನಾವಣಾ ಆಯೋಗವು ನೆರವು ನೀಡಿದೆ. ಇದರಿಂದ, ಬಿಜೆಪಿ ಮುನ್ನಡೆ ಸಾಧಿಸಿ, ಗೆಲ್ಲಲು ಸಾಧ್ಯವಾಗಿದೆ ಎಂಬುದಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ವಿರುದ್ಧ ಬಿಜೆಪಿ ಪಿಸಿ ಮೋಹನ್ 32,707 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಆದರೆ, ಮಹದೇವಪುರದಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ ಪಡೆದ ಮತಗಳ ಅಂತರವು ಬರೋಬ್ಬರಿ 1.14 ಲಕ್ಷಕ್ಕಿಂತ ಹೆಚ್ಚಿತ್ತು.

ಕೃಪೆ: ದಿ ನ್ಯೂಸ್‌ ಮಿನಿಟ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X