- ಯೆಮನ್ ದೇಶದ ಸರ್ಕಾರ ಉರುಳಿಸಿ ಅಧಿಕಾರ ಸ್ಥಾಪಿಸಿರುವ ಹೂತಿಗಳು
- ದಶಕದಲ್ಲೇ ಸಂಭವಿಸಿದ ಭೀಕರ ಕಾಲ್ತುಗಳಿತಗಳಲ್ಲಿ ಒಂದೆನಿಸಿದ ದುರಂತ
ಯೆಮನ್ ದೇಶದಲ್ಲಿ ನೆರವು ವಿತರಣೆ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ 85ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೂತಿ ಅಧಿಕಾರಿಗಳು ಗುರುವಾರ (ಏಪ್ರಿಲ್ 20) ತಿಳಿಸಿದ್ದಾರೆ.
ಯುದ್ಧಪೀಡಿತ ದೇಶದಲ್ಲಿ ಹೂತಿ ನಿಯಂತ್ರಿತ ಜಿಲ್ಲೆಯಾಗಿರುವ ಸಾನಾದ ಬಾಬ್ ಅಲ್-ಯೆಮನ್‌ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 322ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರನ್ನು ನಾನಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಇದು ದಶಕದಲ್ಲೇ ಸಂಭವಿಸಿದ ಅತ್ಯಂತ ಭೀಕರ ಕಾಲ್ತುಳಿತಗಳಲ್ಲಿ ಒಂದೆನಿಸಿದೆ ಎಂದು ಹೇಳಲಾಗಿದ್ದು ಯೆಮನ್ ರಕ್ಷಣಾ ಅಧಿಕಾರಿಗಳು ದೌಡಾಯಿಸಿದ್ದಾರೆ.
“ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ” ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೆಮನ್ ದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರಿಗಳಿಗೆ ನಿರ್ಬಂಧವಿದೆ. ರಂಜಾನ್ ಪವಿತ್ರ ಮಾಸದಲ್ಲೇ ಸಂಭವಿಸಿರುವ ಈ ದುರಂತ ಅರೇಬಿಯಾದ ಬಡರಾಷ್ಟ್ರವಾದ ಯೆಮನ್‌ನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಹೂತಿ ನಿಯಂತ್ರಿತ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಖಾಲಿದ್ ಅಲ್-ಅಜ್ರಿ ಈ ಕುರಿತು ಮಾಹಿತಿ ನೀಡಿದ್ದಾರೆ.
“ಯೆಮನ್ ದೇಶದ ಕೆಲ ವ್ಯಾಪಾರಿಗಳು ಸರ್ಕಾರದ ಆಂತರಿಕ ಸಚಿವಾಲಯದ ಗಮನಕ್ಕೆ ತರದೇ ಬುಧವಾರ (ಏಪ್ರಿಲ್ 19) ಸಂಜೆ ಜನರಿಗೆ ಆರ್ಥಿಕ ನೆರವಿನ ರೂಪದಲ್ಲಿ ಹಣ ವಿತರಿಸಿದ್ದಾರೆ. ಆಗ ಕಾಲ್ತುಳಿತ ಸಂಭವಿಸಿದೆ” ಎಂದು ತಿಳಿಸಿದ್ದಾರೆ.
ನೆರವು ವಿತರಣಾ ಕಾರ್ಯಕ್ರಮ ಆಯೋಜಿಸಿದ್ದ ಇಬ್ಬರು ವ್ಯಾಪಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೂತಿ ಆಂತರಿಕ ಸಚಿವಾಲಯ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ | ಎಸ್‌ಪಿ, ಆರ್‌ಎಲ್‌ಡಿ ನಡುವೆ ಮೂಡದ ಒಮ್ಮತ
ಶಸ್ತ್ರಸಜ್ಜಿತ ಹೂತಿಗಳು ಜನರ ಗುಂಪನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದರು. ಗುಂಡು ವಿದ್ಯುತ್ ತಂತಿಗೆ ಬಡಿದು ಅದು ಸ್ಫೋಟಗೊಂಡಿತು.
ಇದರಿಂದ ಜನರು ಭೀತಿಗೊಂಡು ದಿಕ್ಕಾಪಾಲಾಗಿ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳಾದ ಅಬ್ದುಲ್ ರಹಮಾನ್ ಅಹ್ಮದ್ ಮತ್ತು ಯಾಹಿಯಾ ಮೊಹ್ಸೆನ್ ಹೇಳಿದರು.
ಯೆಮೆನ್ ರಾಜಧಾನಿ ಸಾನಾವನ್ನು ಇರಾನ್ ಬೆಂಬಲಿತ ಹೂತಿಗಳು ನಿಯಂತ್ರಿಸುತ್ತಿದ್ದು 2014ರಲ್ಲಿ ಸರ್ಕಾರವನ್ನು ಉರುಳಿಸಿ ವಶದಲ್ಲಿ ಇರಿಸಿಕೊಂಡಿದ್ದಾರೆ.