ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಕೆಂಡದಂತಹ ಬಿಸಿಲಿಗೂ ಸೆಡ್ಡು ಹೊಡೆದು ಅಭ್ಯರ್ಥಿಗಳು, ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ವಿಷಯವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಾ.ಉಮೇಶ ಜಾಧವ್ ಅವರು ಎರಡನೇ ಬಾರಿಗೆ ಪುನಾರಾಯ್ಕೆಯಾಗಲು ಕಸರತ್ತು ಮುಂದುವರೆಸಿದ್ದಾರೆ.
ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ರಾಜಕಾರಣವೇನು ಹೊಸದಲ್ಲ, ಈ ಹಿಂದೆ ಖರ್ಗೆ ಅವರ ರಾಜಕೀಯ ಬದುಕಿಗೆ ಬೆನ್ನೆಲುಬಾಗಿ ಪರದೆಯ ಹಿಂದೆ ನಿಂತು ತಂತ್ರಗಾರಿಕೆ ರೂಪಿಸಿದ್ದ ರಾಧಾಕೃಷ್ಣ ಅವರು ಇದೇ ಮೊದಲ ಬಾರಿ ನೇರವಾಗಿ ರಾಜಕೀಯ ಅಖಾಡಕ್ಕೆ ಇಳಿದಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ರಣತಂತ್ರ ಹೆಣೆದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿದ ಕಮಲ ಪಡೆ ಈಗ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಅಳಿಯ ಅವರನ್ನು ಮತ್ತೊಮ್ಮೆ ಮಣಿಸಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. ಚುನಾವಣಾ ದಿನಾಂಕ ಘೋಷಣೆ ಮುನ್ನವೇ ಪ್ರಧಾನಿ ಮೋದಿ ಅವರಿಂದ ಕಲಬುರಗಿಯಲ್ಲಿ ಪ್ರಚಾರ ಆರಂಭಿಸಿ ಕಾಂಗ್ರೆಸಿಗೆ ಸವಾಲು ಹಾಕಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಖರ್ಗೆ ಅವರ ಪ್ರತಿಷ್ಠೆಯನ್ನು ಉಳಿಸುವುದು ಕಾಂಗ್ರೆಸ್ ನಾಯಕರಿಗೆ ಬಹುದೊಡ್ಡ ಸವಾಲು ಎನ್ನುವಂತಾಗಿದೆ.
ಕಲಬುರಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರೂ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಮಬಲದ ಪ್ರಚಾರ ಕಾರ್ಯ ನಡೆಸುತ್ತಿದ್ದು, ಕಾಂಗ್ರೆಸ್ಸಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಆರು ಕ್ಷೇತ್ರದ ಶಾಸಕರ ಬಲ, ಪರಿಶಿಷ್ಟ ಸಮುದಾಯ ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವುದರ ಜೊತೆಗೆ ಖರ್ಗೆ ವರ್ಚಸ್ಸು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಅವರು ಕಳೆದ ಬಾರಿ ʼಮೋದಿ ಹವಾʼ ದಲ್ಲಿ ಗೆದ್ದು ಬಂದಂತೆ, ಈ ಬಾರಿಯೂ ಮೋದಿ ʼನಾಮಬಲʼವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಬಲ ಕುಸಿತ ಜೊತೆಗೆ ಮೋದಿ ಗಾಳಿಯೂ ಕಂಡು ಬರುತ್ತಿಲ್ಲ. ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಇಬ್ಬರೇ ಶಾಸಕರಿರುವ ಕಾರಣ ಮೈತ್ರಿಕೂಟ ಬಲ ಅಷ್ಟಕಷ್ಟೇ ಎಂಬಂತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರು ಜಿಲ್ಲೆಗೆ ಘೋಷಣೆಯಾದ ವಂದೇ ಭಾರತ್ ರೈಲು, ಭಾರತ್ ಮಾಲಾ ಯೋಜನೆ ಸೇರಿದಂತೆ ಇನ್ನಿತರ ಸಾಧನೆಗಳು ಹೇಳಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.
ಮೊದಲಿನಿಂದಲೂ ಕಾಂಗ್ರೆಸ್ ಭಧ್ರಕೋಟೆ ಎಂದೇ ಗುರುತಿಸಿಕೊಂಡ ಕಲಬುರಗಿ ಲೋಕಸಭಾ ಕ್ಷೇತ್ರ 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತ್ತು. 2009 ಹಾಗೂ 2014ರಲ್ಲಿ ಸತತವಾಗಿ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಕಳೆದ ಬಾರಿ ಬಿಜೆಪಿಯ ಡಾ.ಉಮೇಶ ಜಾಧವ್ ಎದುರು ಸೋಲೊಪ್ಪಿದರು. ಆದರೆ ಈಗ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸಿ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ʼಕೈʼ ಪಡೆ ಶತಪ್ರಯತ್ನ ನಡೆಸಿದೆ.
ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಕ್ಷೇತ್ರ ಮತ್ತೆ ʼಕೈʼ ವಶ ಮಾಡಿಕೊಳ್ಳಲು ಕಸರತ್ತು ನಡೆಸಿದೆ. ಎಐಸಿಸಿ ಅಧ್ಯಕ್ಷರ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಇದು ಬಹು ಪ್ರತಿಷ್ಠೆಯ ಚುನಾವಣೆಯಾಗಿದೆ. ಸಚಿವ ಶರಣಪ್ರಕಾಶ ಪಾಟೀಲ್, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ಮುಖಂಡರು ʼಕೈʼ ಬಲಪಡಿಸುತ್ತಿದ್ದಾರೆ.
ಮತದಾರರ ಸಂಖ್ಯೆ
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಪುರುಷರು 1034005, ಮಹಿಳೆಯರು 1030677, ಹಾಗೂ ಲಿಂಗತ್ವ ಅಲ್ಪಸಂಖ್ಯಾತರು 336 ಸೇರಿ ಒಟ್ಟು 20,65018 ಮತದಾರರಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.