- ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಮಾನ್ಯ ಮಾಡಿ
- ಎಫ್‌ಸಿಐ ಫುಡ್ ಕಾರ್ಪೊರೇಷನ್ ಆಫ್ ಎನ್‌ಡಿಎ ಆಗುತ್ತಿದೆ: ಟೀಕೆ
ಭಾರತ ಸರ್ಕಾರದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದವರು ರಾಜ್ಯಕ್ಕೆ ಅಕ್ಕಿ ವಿತರಿಸದ ಹಿನ್ನೆಲೆಯಲ್ಲಿ ಜು.21 ಶುಕ್ರವಾರ ವಿಧಾನಸೌಧ ಮತ್ತು ವಿಕಾಸ ಸೌಧದ ಮಧ್ಯದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಮಾಡಲು ಅವಕಾಶ ಕೇಳಿ ಸಭಾಧ್ಯಕ್ಷ ಯು ಟಿ ಖಾದರ್ ಅವರಿಗೆ ನೈಜ ಹೋರಾಟಗಾರರ ವೇದಿಕೆ ಪತ್ರ ಬರೆದಿದೆ.
ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಪತ್ರ ಬರೆದಿದ್ದು, “ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಬಹಳ ವರ್ಷಗಳಿಂದಲೂ ರಾಜಕೀಯ ಪಕ್ಷಗಳ ಶಾಸಕರು, ಕಾರ್ಯಕರ್ತರು ಧರಣಿ, ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ಪುಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ತಾವು ಮಾನ್ಯ ಮಾಡುತ್ತೀರೆಂಬ ವಿಶ್ವಾಸದಿಂದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟಿಸಲು ಅವಕಾಶ ನೀಡಬೇಕು” ಎಂದು ಸಭಾಧ್ಯಕ್ಷರನ್ನು ಕೋರಿದ್ದಾರೆ.
ಪತ್ರದಲ್ಲಿ ಏನಿದೆ?
ರಾಜ್ಯ ಸರ್ಕಾರವು ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಹೊರಟಿರುವುದು ಶ್ಲಾಘನೀಯ. ಕರ್ನಾಟಕ ರಾಜ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ನೀಡಲು ನಿರ್ಧರಿಸಿದ್ದು ಸರಿ ಅಷ್ಟೇ, ಆದರೆ ಭಾರತ ಸರ್ಕಾರದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದವರು ಮೊದಲು ಅಕ್ಕಿಯನ್ನು ಸರಬರಾಜು ಮಾಡುವುದಾಗಿ ಹೇಳಿ ನಂತರ ನಿರಾಕರಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ರಾಜ್ಯ ಸರ್ಕಾರವು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದವರು ಅಕ್ಕಿ ಕೊಡುವುದಿಲ್ಲ ಎಂದು ಹೇಳಿದ ನಂತರ ಬಡವರ ಖಾತೆಗೆ ಹಣ ಜಮಾ ಮಾಡುತ್ತಿರುವುದು ಸಮಂಜಸವಲ್ಲ ಮತ್ತು ನ್ಯಾಯ ಸಮ್ಮತವಲ್ಲ. ಹಸಿದವರಿಗೆ ಹಣ ಕೊಡುವ ಬದಲು ಅನ್ನ ಕೊಡುವ ಸರ್ಕಾರದ ಮೊದಲಿನ ನಿರ್ಧಾರವನ್ನೇ ಮುಂದುವರಿಸಬೇಕು.
ಕೇಂದ್ರ ಸರ್ಕಾರವು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಆಹಾರ ದಾಸ್ತಾನುಗಳನ್ನು ಕಾಲಕಾಲಕನುಗುಣವಾಗಿ ವಿತರಣೆ ಮಾಡುವ ಗುರುತರ ಜವಾಬ್ದಾರಿ ಹೊಂದಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲ ಉದ್ದೇಶವನ್ನು ಉಲ್ಲಂಘಿಸಿ ಅದು ಫುಡ್ ಕಾರ್ಪೋರೇಷನ್ ಆಫ್ ಎನ್‌ಡಿಎ ಆಗಲು ಹೊರಟಿರುವುದು ದುರಾದೃಷ್ಟಕರ ಸಂಗತಿ.
ಈ ದೃಷ್ಟಿಯಿಂದ ನಾವು ವಿಕಾಸ ಸೌಧ ಮತ್ತು ವಿಧಾನಸೌಧದ ಮಧ್ಯೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ವಿರುದ್ಧ ಶಾಂತಿಯುತವಾಗಿ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ವಿಧಾನಸಭಾಧ್ಯಕ್ಷರಾದ ತಾವು ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.