ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯರು ಬರಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದರು.
ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದ ಬಗ್ಗೆ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಕುಮಾರಸ್ವಾಮಿಯವರ ವಿರುದ್ಧ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧಿಸ್ತೀವಿ. ಆದರೆ ಈಗ ಇನ್ನೂ ಬಂಧಿಸುವ ಸನ್ನಿವೇಶ ಬಂದಿಲ್ಲ. ಕುಮಾರಸ್ವಾಮಿಯವರು ಈಗಲೇ ಹೆದರಿದ್ದಾರೆ” ಎಂದು ಕೊಪ್ಪಳದಲ್ಲಿ ಹೇಳಿದ್ದರು.
ಇದಕ್ಕೆ ಖಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಮೈಸೂರಿನ ಮುಡಾ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಎಂದು ಹೇಳುತ್ತಿದ್ದಾರೆ. ಇಂತಹ ಭಂಡತನ ಯಾವ ಸಿಎಂ ಕೂಡ ತೋರಿಲ್ಲ. ನನ್ನ ಬಂಧನ ಮಾಡುವುದಕ್ಕೆ ನೂರು ಜನ ಸಿದ್ದರಾಮಯ್ಯರು ಬರಬೇಕು” ಎಂದು ವಾಗ್ದಾಳಿ ನಡೆಸಿದರು.
“ನನಗೆ ಯಾವುದೇ ಭಯ ಇಲ್ಲ. ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್‌ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ” ಎಂದರು.