- ‘ಪ್ರಜಾಪ್ರಭುತ್ವ ಅರಿತ ವಿಪಕ್ಷ ನಾಯಕರು ಬೇಕಾಗಿದ್ದಾರೆ‘
- ‘ಆರ್‌ಎಸ್‌ಎಸ್ ಕೈಗೊಂಬೆಯಾಗದವರು ಬಿಜೆಪಿಗೆ ಬೇಕು‘
ಚುನಾವಣೆ ಫಲಿತಾಂಶ ಬಂದು ಒಂದೂವರೆ ತಿಂಗಳಾದರೂ ಇನ್ನೂ ವಿಪಕ್ಷ ನಾಯಕರನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ.
ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ. ವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ” ಎಂದು ವ್ಯಂಗ್ಯವಾಡಿದೆ.
“ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಆರ್‌ಎಸ್‌ಎಸ್ ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ!” ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನಿನ ಅಗತ್ಯವಿದೆ
“ಚುನಾವಣೆ ಮುಗಿದು 50ಕ್ಕೂ ಹೆಚ್ಚು ದಿನ ಕಳೆಯಿತು. ನಮ್ಮ ಸರ್ಕಾರ ರಚನೆ ಆಗಿ ತಿಂಗಳು ಕಳೆಯಿತು. ಮಂತ್ರಿಮಂಡಲವೂ ರಚನೆಯಾಯ್ತು. ಸರ್ಕಾರ ಕೆಲಸ ಶುರು ಮಾಡಿಯಾಯ್ತು. ಹಲವು ಕ್ಯಾಬಿನೆಟ್ ಸಭೆಗಳಾದವು, ಹಲವು ತೀರ್ಮಾನಗಳಾದವು. ಮೂರು ಗ್ಯಾರಂಟಿಗಳೂ ಜಾರಿಯಾದವು. ಇಷ್ಟೆಲ್ಲಾ ಆದರೂ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ” ಎಂದು ಟೀಕಿಸಿದೆ.
“ಬಿಜೆಪಿ ಆಡಳಿತ ಮಾಡಲು ನಾಲಾಯಕ್ ಎಂದು ಈಗಾಗಲೇ ಜನರು ಸರ್ಟಿಫಿಕೇಟ್ ಕೊಟ್ಟಾಗಿದೆ, ಈಗ ವಿರೋಧ ಪಕ್ಷವಾಗಿರಲೂ ಸಹ ನಾಲಾಯಕ್ ಎಂದು ತಿಳಿಯುತ್ತಿದೆ. ಪ್ರಜಾಪ್ರಭುತ್ವದ ಸೌಂದರ್ಯಕ್ಕಾಗಿ ಸಮರ್ಥ ವಿಪಕ್ಷ ನಾಯಕನನ್ನು ಎದುರು ನೋಡುತ್ತಿದ್ದೇವೆ. ನಮ್ಮ ಆಸೆ ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ” ಎಂದಿದೆ.