- ತುಮಕೂರಿನ ಶಿರಾ ಬಳಿ ವಾಹನ ಅಪಘಾತದಲ್ಲಿ ಮಡಿದಿದ್ದ ಫರ್ದೀನ್
- ಸಾವಿನ ಬಳಿಕ ಹಲವರಿಗೆ ಅಂಗಾಂಗ ದಾನ ಮಾಡಿದ ಮೃತನ ಕುಟುಂಬ
ಸಾವಿನ ಬಳಿಕ ಅಂಗಾಂಗ ದಾನ ಮಾಡುವ ಮೂಲಕ ಮುಸ್ಲಿಂ ಧಾರ್ಮಿಕ ಕಟ್ಟುಪಾಡು ಮೀರಿದ ಕುಟುಂಬವೊಂದರ ಕಾರ್ಯವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ಇಂದು ಫರ್ದೀನ್ ಖಾನ್ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ ಗುಂಡೂರಾವ್, ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದ ಫರ್ದೀನ್ ಕುಟಂಬವನ್ನ ಸನ್ಮಾನಿಸಿದರು.
ಭೇಟಿ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡ ದಿನೇಶ್ ಗುಂಡೂರಾವ್, ಅಂಗಾಂಗ ದಾನ ನಿಜವಾಗಿ ಆತ್ಮ ಚೈತನ್ಯ ನೀಡುವ ಕಾರ್ಯ, ಮುಸ್ಲಿಂ ಸಮುದಾಯದಲ್ಲಿ ಅಂಗಾಂಗ ದಾನಕ್ಕೆ ಧಾರ್ಮಿಕ ಕಟ್ಟುಪಾಡುಗಳಿವೆ.
ಆದರೆ ಫರ್ದೀನ್ ಕುಟುಂಬ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಆತನ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಆರು ಜನರ ಬದುಕಿಗೆ ಮರುಜೀವ ನೀಡಿದ್ದು ಮಾದರಿ ಕಾರ್ಯ, ಎಲ್ಲರೂ ಇದೇ ರೀತಿ ಅಂಗಾಂಗ ದಾನಕ್ಕೆ ಮುಂದಾದರೆ ಹಲವರ ಜೀವ ಉಳಿಸಬಹುದು ಎಂದರು.
ಅಂಗಾಗ ದಾನದ ಹಿನ್ನೆಲೆ
22 ವರ್ಷದ ಫರ್ದೀನ್ ಖಾನ್ ಜೂನ್ 4 ರಂದು ಮದುವೆ ಸಮಾರಂಭ ಮುಗಿಸಿ ವಾಪಸ್ ಬರುತ್ತಿದ್ದಾಗ ತುಮಕೂರಿನ ಶಿರಾ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ, ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಫರ್ದೀನ್ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.
ಈ ಸುದ್ದಿ ಓದಿದ್ದೀರಾ?:ಬೆಂಗಳೂರು ನಗರದಲ್ಲಿ 250 ಇಂದಿರಾ ಕ್ಯಾಂಟೀನ್ ಪ್ರಾರಂಭ: ಸಿಎಂ ಸಿದ್ದರಾಮಯ್ಯ
ಜೂನ್ 7 ಬೆಳಗ್ಗೆ 11.55ಕ್ಕೆ ಫರ್ದೀನ್ ಖಾನ್ ‘ಮೆದುಳು ನಿಷ್ಕ್ರೀಯ’ಗೊಂಡಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ಆದರೆ, ಮೆದುಳು ಮಾತ್ರ ನಿಷ್ಕ್ರಿಯಗೊಂಡರೂ ಉಳಿದೆಲ್ಲಾ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು.
ಈ ದುಃಖದ ಸನ್ನಿವೇಶದಲ್ಲಿ ಫರ್ದೀನ್ ಕುಟುಂಬದವರು ತಮ್ಮ ಮಗನ ದೇಹದ ಅಂಗಾಂಗಗಳನ್ನು ದಾನ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೂಲಕ 6 ಜನರಿಗೆ ಜೀವ ತುಂಬಿದ್ದರು. ಆತನ ಹೃದಯವನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದ 57 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.
ಪಿತ್ತಜನಕಾಂಗವನ್ನು ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 42 ವರ್ಷದ ರೋಗಿಗೆ ಕಸಿ ಮಾಡಲಾಗಿದೆ. ಎಡ ಮೂತ್ರಪಿಂಡ ಮತ್ತು ಪ್ಯಾಂಕ್ರಿಯಾಸ್‌ನ್ನು ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಬಹು ಅಂಗಾಂಗ ಕಸಿ ಮಾಡಲಾಗಿದೆ. ಬಲ ಮೂತ್ರಪಿಂಡವನ್ನು ಸ್ಪರ್ಶ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಿದರೆ, ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ.