- ‘ಇಂದಿರಾಗಾಂಧಿ ಬಡವರಿಗೆ ಬದುಕು ಕಲ್ಪಿಸಿಕೊಟ್ಟ ದಿಟ್ಟ ಧೈರ್ಯವಂತೆ’
- ‘ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ದೇಶದ ಮಣ್ಣಿನಲ್ಲಿ ದಾಖಲಾಗಿದೆ’
ಇಂದಿರಾ ಗಾಂಧಿ ಅವರಂತಹ ಜನಪರ-ಜನಪ್ರಿಯ ಪ್ರಧಾನಮಂತ್ರಿ ಮತ್ತೆ ಯಾರೂ ಬಂದಿಲ್ಲ. ಅತ್ಯಂತ ಧೈರ್ಯವಂತ ಮಹಿಳೆ. ದೇಶದ ಬಡವರ ಆರಾಧ್ಯದೈವ ಆಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಮಾತುಗಳನ್ನಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 39 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಾತ್ಮಗಾಂಧಿ ಹತ್ಯೆ, ಇಂದಿರಾಗಾಂಧಿ ಹತ್ಯೆ, ರಾಜೀವ್ ಗಾಂಧಿ ಹತ್ಯೆ ದೇಶಕ್ಕೆ ಆದ ದೊಡ್ಡ ನಷ್ಟ. ಈ ಮೂವರು ದೇಶಕ್ಕಾಗಿ ಹುತಾತ್ಮರಾದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಇವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ನಮ್ಮ ದೇಶದ ಮಣ್ಣಿನಲ್ಲಿ ದಾಖಲಾಗಿದೆ” ಎಂದರು.
“ಬಿಜೆಪಿಯವರಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಚರಿತ್ರೆ ಇಲ್ಲ. ಕೇವಲ ಖಾಲಿ ದೇಶಭಕ್ತಿ ಬಗ್ಗೆ ಭಾಷಣ ಮಾಡುತ್ತಾರೆ. ಖಾಲಿ ಭಾಷಣಗಳಿಂದ ದೇಶಕ್ಕೆ, ದೇಶದ ಜನರಿಗೆ ಏನೂ ಸಿಗುವುದಿಲ್ಲ. ಇಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅಪಾರ ಎಂದು ಅವರ ಹೋರಾಟದ ಘಟನೆಗಳನ್ನು ಸ್ಮರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ಮುಖಂಡರು ವೇದಿಕೆಯಲ್ಲಿದ್ದರು.