ಬಡ ಹಾಗೂ ಭೂ ರಹಿತ ರೈತರಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಭೂ ಮಂಜೂರು ಮಾಡಲು ರಾಜ್ಯಾದ್ಯಂತ ಈವರೆಗೆ ಒಟ್ಟಾರೆ 185 ಸಮಿತಿಗಳನ್ನು ರಚಿಸಲಾಗಿದೆ. ರೈತರು ಭೂ ಮಂಜೂರಾತಿಗಾಗಿ ನಮೂನೆ 53, ನಮೂನೆ 57 ಅರ್ಜಿ ಹಾಕಿದ್ದರೆ, ಅರ್ಜಿ ಇತ್ಯರ್ಥ ಆಗುವ ಮೊದಲು ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರು ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಅರ್ಜಿ ಹಾಕಿರುವ ಕಡೆ ಬೆಳೆ ತೆಗೆದುಕೊಳ್ಳಲೂ ಸಹ ಅಧಿಕಾರಿಗಳು ಅಡ್ಡಿಪಡಿಸಬಾರದು. ಈ ಸಂಬಂಧ ಸ್ಪಷ್ಟವಾದ ಕಾನೂನನ್ನು ರೂಪಿಸಲಾಗಿದೆ. ಭಾಗಶಃ ಬಗರ್ ಹುಕುಂ ಯೋಜನೆಗೆ ಸಂಬಂಧಿಸಿ ಇಷ್ಟು ಸ್ಪಷ್ಟವಾಗಿ ಹಿಂದೆ ಯಾವತ್ತು ಸುತ್ತೋಲೆ ಹೊರಡಿಸಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
“ಬಡ ಹಾಗೂ ಭೂ ರಹಿತ ರೈತರಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಭೂ ಮಂಜೂರು ಮಾಡಲು ರಾಜ್ಯಾದ್ಯಂತ ಈವರೆಗೆ 185 ಸಮಿತಿಗಳನ್ನು ರಚಿಸಿ, ಅರ್ಜಿ ವಿಲೇವಾರಿಯನ್ನೂ ತ್ವರಿತಗೊಳಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲೇ ಇದೊಂದು ಹೊಸ ದಾಖಲೆ” ಎಂದು ಹೇಳಿದರು.
“ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ, ಅತಿಹೆಚ್ಚು ಬಗರ್ ಹುಕುಂ ಸಮಿತಿಗಳನ್ನು ರಚಿಸಿದ್ದು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ಅಲ್ಲದೆ, ಅರ್ಜಿ ವಿಲೇವಾರಿಗೊಳಿಸಿ ಅರ್ಹ ರೈತರಿಗೆ ಭೂ ಮಂಜೂರುಗೊಳಿಸುವ ಪ್ರಕ್ರಿಯೆಗೂ ಸಾಕಷ್ಟು ವೇಗ ತುಂಬಲಾಗುತ್ತಿದೆ. ಸ್ವತಃ ನಾನೇ ನೇರವಾಗಿ ಪರಿಶೀಲಿಸಿ ವಿಲೇ ಕೆಲಸಗಳನ್ನು ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಅಧಿಕಾರಿಗಳಿಗೆ ಗಡುವು ನೀಡಿದ್ದು ನಿಜ, ಸರ್ಕಾರವೇ ಅದನ್ನು ಬೆನ್ನಟ್ಟಿರುವುದೂ ನಿಜ” ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಶೈಲೇಂದ್ರ ಬೆಲ್ದಾಳೆ, “ರಾಜ್ಯದಲ್ಲಿ ಎಲ್ಲೂ ಸರಿಯಾಗಿ ಬಗರ್ ಹುಕುಂ ಸಮಿತಿ ರಚಿಸಿಯೇ ಇಲ್ಲ. ಬೀದರ್ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಆ ಕಾರಣಕ್ಕಾಗಿಯೇ ಸರ್ಕಾರ ಈವರೆಗೂ ಬಗರ್ ಹುಕುಂ ಸಮಿತಿ ಸಚಿಸಿಲ್ಲವೇ..? ಎಂದು ಮರುಪ್ರಶ್ನೆ ಹಾಕಿದರು.
ಶಾಸಕರ ಅನುಮಾನಗಳಿಗೆ ಸಮಂಜಸ ಉತ್ತರದ ಮೂಲಕ ತೆರೆ ಎಳೆಯಲು ಮುಂದಾದ ಸಚಿವರು, “ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸಮಿತಿ ರಚನೆ ಆಗಿಲ್ಲ, ಆಗಬೇಕು ಎಂದು ಒಪ್ಪಿಕೊಳ್ಳುತ್ತೇನೆ. ಅಲ್ಲದೆ, ಆದಷ್ಟು ಶೀಘ್ರದಲ್ಲಿ ಅವರ ಕ್ಷೇತ್ರದಲ್ಲಿ ಸಮಿತಿ ರಚನೆಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳಲು ನಾನು ಬದ್ಧನಾಗಿದ್ದೇನೆ. ಆದರೆ, ರಾಜ್ಯಾದ್ಯಂತ ಎಲ್ಲೂ ಬಗರ್ ಹುಕುಂ ಸಮಿತಿಯೇ ರಚನೆಯಾಗಿಲ್ಲ ಎಂದು ಆಧಾರವಿಲ್ಲದೆ ಹೇಳುವುದು ಸರಿಯಲ್ಲ. ರಾಜ್ಯಾದ್ಯಂತ ದಾಖಲೆಯ 185 ಸಮಿತಿ ರಚನೆ ಆಗಿದೆ. ಆರ್‌ಟಿಐನಲ್ಲಿ ಪ್ರಶ್ನೆ ಕೇಳಿದರೂ ಸೂಕ್ತ ಮಾಹಿತಿ ನೀಡುತ್ತೇನೆ” ಎಂದು ಸವಾಲೆಸೆದರು.
ಮುಂದುವರೆದು, “ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳಷ್ಟೇ ಅಲ್ಲ, ಏಳೂ ತಾಲೂಕುಗಳಲ್ಲೂ ಬಗರ್ ಹುಕುಂ ಸಮಿತಿ ರಚಿಸಲಾಗಿಲ್ಲ. ಅಲ್ಲದೆ, ರಾಜ್ಯದ ಇನ್ನೂ 13 ಕ್ಷೇತ್ರಗಳಲ್ಲಿ ಸಮಿತಿ ರಚನೆ ಕೆಲಸ ಬಾಕಿ ಇದೆ. ಈ ಸಂಬಂಧ ನಾನು ಅವರಿವರ ಮೇಲೆ ಸಬೂಬು ಹೇಳುವುದಿಲ್ಲ. ಏಕೆಂದರೆ ಇದು ನನ್ನ ಜವಾಬ್ದಾರಿ. ಹೀಗಾಗಿ ಬೀದರ್ ದಕ್ಷಿಣ ಸೇರಿದಂತೆ ಬಗರ್ ಹುಕುಂ ಸಮಿತಿ ರಚನೆಗೆ ಬಾಕಿ ಇರುವ ಎಲ್ಲಾ ಕ್ಷೇತ್ರದಲ್ಲೂ ಮುಂದಿನ ಹತ್ತು ದಿನಗಳಲ್ಲಿ ಸಮಿತಿ ರಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ನಾನು ಬದ್ಧನಾಗಿದ್ದೇನೆ” ಎಂದು ಉತ್ತರಿಸಿದರು.
ಅರ್ಜಿ ವಿಲೇಯಾಗದೆ ರೈತರಿಗೆ ತೊಂದರೆ ಸಲ್ಲ..!
ಬಗರ್ ಹುಕುಂ ಯೋಜನೆಯ ಅಡಿ ಸಲ್ಲಿಸಲಾಗಿರುವ ನಮೂನೆ 53 ಹಾಗೂ ನಮೂನೆ 57 ಅರ್ಜಿ ವಿಲೇವಾರಿಯಾಗದೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡುವುದು ಅಥವಾ ಒಕ್ಕಲೆಬ್ಬಿಸುವಂತಿಲ್ಲ. ರಾಜ್ಯದಲ್ಲಿ ಇಂತಹ ಯಾವುದೇ ಪ್ರಕರಣ ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ತಿಳಿಸಿದರು.