- ಜಿಲ್ಲೆಯಲ್ಲಿ ಮೊಟ್ಟ ಮೊದಲ ಭಾರಿಗೆ ಬಿಜೆಪಿ ಬಾವುಟ ಹಾರಿಸಿದ್ದ ಶಾಸಕ
- ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ್ ಮಂಡಿಮಠ್
ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದ ಶಾಸಕ ಬಸವರಾಜ್ ಮಂಡಿಮಠ್ ಕಳೆದ ಕೆಲವು ದಿನಗಳ ಹಿಂದೆ ಜೆಡಿಎಸ್ ಸೇರಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅವರ ಮಗ ಸೋಮಶೇಖರ್ ಮಂಡಿಮಠ್ ಬುಧವಾರ ಬಿಜೆಪಿ ಅಭ್ಯರ್ಥಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅಪ್ಪ ಜೆಡಿಎಸ್‌ನಲ್ಲಿ ಮಗ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವುದು ಕ್ಷೇತ್ರದ ಜನರು ಗೊಂದಲಕ್ಕೀಡು ಮಾಡಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ಮಂಡಿಮಠ್ ಇತ್ತೀಚೆಗೆ ಜೆಡಿಎಸ್ ಸೇರಿ, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಪರ ಪ್ರಚಾರ ನಡೆಸುತ್ತಿದ್ದರು. ತಂದೆಗೆ ಸಾಥ್ ನೀಡಿದ್ದ ಮಗ ಸೋಮಶೇಖರ್ ಮಂಡಿಮಠ್ ಕೂಡ ಜೆಡಿಎಸ್‌ನಲ್ಲಿ ತಂದೆಯೊಂದಿಗೆ ಕಾಣಿಸಿಕೊಂಡಿದ್ದರು.
ಆದರೆ, ಬುಧವಾರ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಸೋಮಶೇಖರ್ ಮಂಡಿಮಠ್ ಬಿಜೆಪಿ ಅಭ್ಯರ್ಥಿಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಕುಟುಂಬದವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದಾರೆ. ಕ್ಷೇತ್ರವು ಪುನರ್‌ವಿಂಗಡಣೆ ಆದ ನಂತರ, ಕ್ಷೇತ್ರ ಇಲ್ಲದಂತಾಗಿ, ಚಳ್ಳಕೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? : ಚುನಾವಣೆ 2023 | ಜನಾರ್ದನ ರೆಡ್ಡಿ ಪತ್ನಿಯ ಘೋಷಿತ ಆಸ್ತಿ ₹250 ಕೋಟಿ
ಕಳೆದ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಪರ ಗುರುತಿಸಿಕೊಂಡಿದ್ದರು. ಆದರೆ, ಇದ್ದಕಿದ್ದಂತೆ ಚುನಾವಣಾ ಕೊನೆಯಲ್ಲಿ ಅಂತರ ಕಾಯ್ದಕೊಂಡು ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರು. ಜೊತೆಗೆ ಕಳೆದ ಐದು ವರ್ಷಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಅಭ್ಯರ್ಥಿ ರವೀಶ್ ನೇತೃತ್ವದಲ್ಲಿ ಜೆಡಿಎಸ್ ಸೇರಿ ಕುಮಾರಸ್ವಾಮಿ ಜೊತೆಗೆ ಪಂಚರತ್ನ ಯಾತ್ರೆಯಲ್ಲಿ ಬಸವರಾಜ್ ಮಂಡಿಮಠ್ ಕಾಣಿಸಿಕೊಂಡಿದ್ದರು.
ಈ ನಡುವೆ, ಬುಧವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಕ್ಷೇತ್ರದ ಜನರು ಅಪ್ಪನ ಪರ ನಿಲ್ಲಬೇಕೋ ಅಥವಾ ಮಗನ ಪರ ನಿಲ್ಲಬೇಕೋ ಎಂಬುವುದನ್ನು ತಿಳಿಯದೇ ಗೊಂದಲಕ್ಕೀಡಾದರೆ, 2 ಪಕ್ಷದ ಕಾರ್ಯಕರ್ತರಿಗೆ ಈ ಘಟನೆ ಇರುಸು ಮುರುಸು ತಂದಿದೆ.