ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ಪ್ರಕ್ರಿಯೆಯಿಂದ 387 ಕುಟುಂಬಗಳು, 2,989 ಜನ ಸಂಪೂರ್ಣ ಭೂರಹಿತರಾಗಲಿದ್ದಾರೆ. ಇಲ್ಲಿನ ರೈತರು ಕೃಷಿಯನ್ನೇ ಅವಲಂಬಿಸಿದ್ದು, ಭೂಮಿಯ ಉಳಿವಿಗಾಗಿ ಬೀದಿಯಲ್ಲಿ ಕುಳಿತು ಸಾವಿರ ದಿನಗಳೇ ಕಳೆಯುತ್ತಿವೆ...
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನದ ವಿರುದ್ಧ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಹೋರಾಟ ಡಿ.30ಕ್ಕೆ (ಡಿಸೆಂಬರ್ 30, 2024) ಸಾವಿರ ದಿನಗಳನ್ನು ಪೂರೈಸಲಿದೆ. ಈ ಅವಧಿಯಲ್ಲಿ ಬಿಜೆಪಿ ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಬಂದರೂ ‘ಉಳುಮೆ ಮಾಡುವ ಬದಕನ್ನು ನಮ್ಮಿಂದ ದೂರಮಾಡಬೇಡಿ’ ಎನ್ನುವ ರೈತರ ಹಕ್ಕೊತ್ತಾಯ ಈಡೇರಿಲ್ಲ. ರೈತರನ್ನು ಕಡೆಗಣಿಸುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಧರಣಿನಿರತ ರೈತರು ಫಲವತ್ತಾದ ಕೃಷಿ ಭೂಮಿಯ ಉಳಿವಿಗಾಗಿ ಚನ್ನರಾಯಪಟ್ಟಣದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಕೃಷಿಗೆ ಯೋಗ್ಯ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಬಳಸುವಂತಿಲ್ಲ ಎಂದು ಸರ್ಕಾರವೇ ಒಂದು ಕಡೆ ಕಾನೂನು ಮಾಡುತ್ತದೆ. ಆದರೆ, ಚನ್ನರಾಯಪಟ್ಟಣದ ಸುತ್ತಮುತ್ತಲಿನದು ಫಲವತ್ತಾದ ಕೃಷಿಭೂಮಿ. ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಈ ಭೂಮಿಯಲ್ಲಿ ಸುಮಾರು ಒಂದು ಸಾವಿರ ಟನ್ ರಾಗಿ ಮತ್ತಿತರ ಆಹಾರ ಧಾನ್ಯಗಳು, ಎರಡು ಸಾವಿರ ಟನ್ ದ್ರಾಕ್ಷಿ ಹಾಗೂ 100-150 ಟನ್ ಮಾವು, ಇತರ ಹಣ್ಣುಗಳು ಸೇರಿದಂತೆ ತರಕಾರಿ, ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರತಿಭಟನಾನಿರತ 13 ಹಳ್ಳಿಗಳಲ್ಲಿ ಪ್ರತಿದಿನ 6-8 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಜೊತೆಗೆ ಗುಣಮಟ್ಟದ ರೇಷ್ಮೆಗೂಡು ಮತ್ತು ಬೆಂಗಳೂರು ನೀಲಿದ್ರಾಕ್ಷಿ ಉತ್ಪಾದನೆ ಆಗುತ್ತಿದೆ. ಇದರಿಂದ ಅಲ್ಲಿನ ಜನಕ್ಕೆ ಆಹಾರ ಮತ್ತು ಆರ್ಥಿಕ ಭದ್ರತೆ ಸಿಕ್ಕಿದೆ.
ವಾಸ್ತವ ಹೀಗಿರುವಾಗಲೂ, ‘ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆ‘ಗಾಗಿ ರೈತರ ಫಲವತ್ತಾದ ಭೂಮಿಯನ್ನು ಬಂಜರು ಭೂಮಿ ಎಂದು ದಾಖಲೆಗಳಲ್ಲಿ ನಮೂದಿಸಿ, ಭೂ ಒಡೆಯರಾದ ಬಡ ರೈತರೊಂದಿಗೆ ಚರ್ಚಿಸದೇ 2021ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ಕಲಂ 3(1)ರನ್ವಯ ಅಧಿಸೂಚನೆಯ ಅಡಿಯಲ್ಲಿ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಪ್ರೋತ್ರಿಯ ತೆಲ್ಲೋಹಳ್ಳಿ ಮತ್ತು ಹ್ಯಾಡಾಳ ಗ್ರಾಮಗಳ 1,777 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಮೂರು ವರ್ಷಗಳ ಹಿಂದೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರಾಥಮಿಕ ಅಧಿಸೂಚನೆ ಹೊರಡಿಸಿತು.
ಭೂಸ್ವಾಧೀನ ಬಗ್ಗೆ ಬಡ ರೈತರಿಗೆ ನೋಟಿಸ್ ನೀಡಿದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದರು. ಕೃಷಿ ಹಿನ್ನೆಲೆಯಿಂದ ಬಂದ ಕುಟುಂಬ ನಮ್ಮದು ಎಂದು ಹೇಳಿಕೊಳ್ಳುವ ಈ ಇಬ್ಬರೂ ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ರೈತವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡಿರುವುದಕ್ಕೆ ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ನೀಡಿರುವ ಭೂಸ್ವಾಧೀನ ನೋಟಿಸ್‌ಗಳೇ ಸಾಕ್ಷಿಯಾಗಿದ್ದವು.
ಅಂದಿನ ಬಿಜೆಪಿ ಸರ್ಕಾರದ ನಿರ್ಧಾರ ವಿರೋಧಿಸಿ ಜನವರಿ 28, 2022ರಂದು ಚನ್ನರಾಯಪಟ್ಟಣ ನಾಡಕಚೇರಿ ಎದುರು ಸಾಂಕೇತಿಕವಾಗಿ ರೈತರು ಒಂದು ದಿನ ಪ್ರತಿಭಟನೆ ಕೈಗೊಂಡು, ಕೆಐಎಡಿಬಿ ನೀಡಿದ್ದ ನೋಟಿಸ್‌ಗಳನ್ನು ಸಾರ್ವಜನಿಕವಾಗಿ ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಐಎಡಿಬಿ ತನ್ನ ಹೆಜ್ಜೆ ಹಿಂತೆಗೆಯದಿದ್ದಾಗ ಭೂಮಿ ಕಳೆದುಕೊಳ್ಳುವ ರೈತರು ಒಂದಾಗಿ ‘ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ’ ರಚಿಸಿಕೊಂಡು ತಮ್ಮ ಕೃಷಿ ಭೂಮಿಯ ರಕ್ಷಣೆಗಾಗಿ ಏಪ್ರಿಲ್ 4, 2022ರಂದು ಅನಿರ್ದಿಷ್ಟಾವಧಿ ಧರಣಿಗೆ ಕುಳಿತರು.

ದಿನಗಳು ಉರುಳಿದಂತೆ ಕೊನೆಗೆ ಬಿಜೆಪಿ ಸರ್ಕಾರವೇ ಬಿದ್ದು ಹೋಗಿ, ಕಾಂಗ್ರೆಸ್ ಸರ್ಕಾರ ರಚನೆಯಾಯಿತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಾಗಿದ್ದರೂ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಬೇಡಿಕೆ ಈಡೇರಿಲ್ಲ. ರೈತರ ಅನಿರ್ದಿಷ್ಟಾವಧಿ ಧರಣಿ ಇತಿಹಾಸ ಸೃಷ್ಟಿಸುವತ್ತ ಹೆಜ್ಜೆಯಿಟ್ಟಿದೆ.
ಹಲವಾರು ಕಾರಣಗಳಿಗಾಗಿ ಚನ್ನರಾಯಪಟ್ಟಣ ಹೋಬಳಿಯ ಸಾವಿರಾರು ಎಕರೆ ಭೂಮಿಯನ್ನು ಈಗಾಗಲೇ ಕೆಐಎಡಿಬಿ ವಶಪಡಿಸಿಕೊಂಡಿದೆ. ಚನ್ನರಾಯಪಟ್ಟಣ ಮತ್ತು ಕುಂದಾಣದ ಸುತ್ತಲಿನ ಹಳ್ಳಿಗಳ 2,030 ಎಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ವಶಪಡಿಸಿಕೊಂಡ ಭೂಮಿಗೆ ಸರ್ಕಾರ ಪರಿಹಾರ ನೀಡಿದ್ದರೂ ಆ ಪರಿಹಾರದ ಮೊತ್ತ ರೈತರ ಕುಟುಂಬಗಳ ಬದುಕನ್ನು ಭದ್ರಪಡಿಸಿಲ್ಲ. ಭೂ ಮಾಲೀಕತ್ವವನ್ನೇ ಕಳೆದುಕೊಂಡ ನೂರಾರು ರೈತರು ಕೇವಲ ಮೂರು ವರ್ಷಗಳ ಅಂತರದಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 1999-2000ರಲ್ಲಿ ಅಂದಾಜು 4,030 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾವಾಪುರ, ಅರಿಶಿನಗುಂಟೆ ಹಾಗೂ ಗಂಗೋಪನಹಳ್ಳಿ ಎಂಬ ಮೂರು ಹಳ್ಳಿಗಳ ಜನರನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿತ್ತು. 200ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಲಿಬೆಲೆ ಪಕ್ಕದ ಬಾಲೆಪುರ ಎಂಬಲ್ಲಿ ನಿವೇಶನ ನೀಡಲಾಗಿತ್ತು. ಅವರು ಕಳೆದುಕೊಂಡ ಜಮೀನಿಗೆ ಸೂಕ್ತ ದಾಖಲೆ ಇದ್ದವರಿಗೆ ಮಾತ್ರ ಸರ್ಕಾರ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಿತ್ತು. ಅವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ, 2008ರಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಾಗ ಅವರಿಗೆ ಯಾವುದೇ ಉದ್ಯೋಗ ನೀಡಲಿಲ್ಲ.
ಏರೋಸ್ಪೇಸ್ ಎಸ್‌ಇಜೆಡ್‌ಗಾಗಿ 2014-15ರಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 900 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆ ಜಮೀನನ್ನು ಹಲವು ಕೈಗಾರಿಕೆಗಳಿಗೆ ವಿತರಿಸಲಾಯಿತು. ಆದಾಗ್ಯೂ, ಈವರೆಗೆ ಆ ಪ್ರದೇಶದಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. 2018-19ರಲ್ಲಿ ಹರಳೂರು ಕೈಗಾರಿಕಾ ಅಭಿವೃದ್ದಿ ಪ್ರದೇಶಕ್ಕಾಗಿ ಮೊದಲ ಹಂತದಲ್ಲಿ 1,300 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ 1,777 ಎಕರೆ ಜಮೀನು ವಶಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿರುವುದು ಆ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷಿ ಭೂಮಿ ಕಳೆದುಕೊಂಡ ಮೇಲೆ ಭೂಮಿಯ ಮಹತ್ವ ರೈತರಿಗೆ ಅರ್ಥವಾಗಿದೆ. ಉಳಿದ ರೈತರು ಎಚ್ಚೆತ್ತುಕೊಂಡು ಯಾವ ಕಾರಣಕ್ಕೂ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲವೆಂಬ ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ. ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಸ್ವಾಧೀನಕ್ಕೆ ಶೇ.80ರಷ್ಟು ರೈತರು ಭೂಮಿ ಕೊಡಲು ನಿರಾಕರಿಸಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರೈತರ ಬೇಡಿಕೆಗಳ ಬಗ್ಗೆ ಗಮನ ಹರಿಸದಿದ್ದಾಗ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಅಭ್ಯರ್ಥಿಗೆ ಮತ ನೀಡಲು ಮತ್ತು ಬಿಜೆಪಿ ಅಭ್ಯರ್ಥಿಗೆ ಮತ ನೀಡದಿರಲು ಕರೆ ಕೊಟ್ಟರು. ಪರಿಣಾಮ ಬಿಜೆಪಿ ಅಭ್ಯರ್ಥಿ ಪಿಳ್ಯ ಮುನಿಶಾಮಪ್ಪ ಸೋತು ಮನೆ ಸೇರಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಗಮನ ಸೆಳೆಯುವ ಹಲವು ಪ್ರತಿಭಟನೆಗಳನ್ನು ಮಾಡಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೇರಲು ರೈತರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಕಳೆದ ಜುಲೈ 23ರಂದು ಮುಖ್ಯಮಂತ್ರಿ ಮನೆಗೆ ಜಾಥಾ ನಡೆಸಿದರು. ಪೊಲೀಸರು ರೈತರನ್ನು ತಡೆದು ಜಾಥಾವನ್ನು ಅರ್ಧಕ್ಕೆ ನಿಲ್ಲಿಸಿದರು. ಆಗಸ್ಟ್ 27ರಂದು ಬೆಂಗಳೂರು ನಗರದ ಡಿಸಿಪಿ ಕಚೇರಿಗೆ ತೆರಳಿದ ರೈತರು, ”ರೈತರನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೂ ರೈತ ಕೋಟಿಯ ಅಭಿನಂದನೆಗಳು” ಎಂದು ಅತ್ಯಂತ ವಿಷಾದಪೂರ್ವಕ ವ್ಯಂಗ್ಯವಾಡಿ ಪ್ರತಿಭಟಿಸಿದರು.
ಇದೆಲ್ಲದರ ನಡುವೆ, ‘ಕೆ ಎಚ್ ಮುನಿಯಪ್ಪ ಅವರು ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಭೂ ಸ್ವಾಧೀನ ರದ್ದು ಪಡಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ಲೋಕಸಭೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಯಾವ ಕ್ರಮವೂ ಆಗಿಲ್ಲ. ಹೀಗಾಗಿ, ಸೆಪ್ಟೆಂಬರ್ 20ರಂದು ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರು, ‘ಸಚಿವರಿಗೆ ತಾವು ಕೊಟ್ಟ ಭರವಸೆ ನೆನಪಿಸಲು ಬಂದಿದ್ದೇವೆ. ಅವರು ಬಂದು ನಮ್ಮ ಮನವಿ ಆಲಿಸುವವರೆಗೂ ನಾವು ತೆರಳುವುದಿಲ್ಲ’ ಎಂದು ಸಚಿವರ ಮನೆ ಮುಂದೆ ಧರಣಿ ಕುಳಿತರು.
ಮೇಲ್ನೋಟಕ್ಕೆ ಉದ್ಯೋಗ ಸೃಷ್ಟಿಯ ನೆಪ ಹೇಳುವ ಕೆಐಎಡಿಬಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಸಾವಿರಾರು ಎಕರೆ ಭೂಮಿಯನ್ನೇ ಕೈಗಾರಿಕೆಗಳಿಗೆ ಸರಿಯಾಗಿ ಹಂಚಿಕೆ ಮಾಡಿಲ್ಲ. ಕೈಗಾರಿಕೆಗಳೂ ಆರಂಭವಾಗಿಲ್ಲ ಎಂಬ ಆರೋಪವಿದೆ. ಹೀಗಿದ್ದರೂ ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳುವ ಹುನ್ನಾರದಿಂದ ರೈತರ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗುತ್ತಿದೆ ಎಂಬುದು ಪ್ರಜ್ಞಾವಂತ ರೈತರ ಅಭಿಪ್ರಾಯ. ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡುವ ಕೈಗಾರಿಕೆಗಳು ಸ್ಥಳೀಯರಿಗೆ ಕೊಡುವುದು ಕೇವಲ ಬಾತ್ ರೂಂ ಸ್ವಚ್ಛಗೊಳಿಸುವಂತಹ ಡಿ-ದರ್ಜೆಯ ಕೆಲಸಗಳನ್ನಷ್ಟೇ ಹೊರತು ಯಾವುದೇ ಉನ್ನತ ಸ್ಥಾನದ ಹುದ್ದೆಗಳನ್ನಲ್ಲ ಎಂಬ ನೋವು ಆ ಭಾಗದ ರೈತರನ್ನು ಬಾಧಿಸುತ್ತಿದೆ.
ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯ ಕೆರೆ, ಕಟ್ಟೆ, ಕಾಲುವೆಗಳ ಒಡಲು ಸೇರಲಿದೆ. ಈಗಾಗಲೇ ದೊಡ್ಡಬಳ್ಳಾಪುರ ಸುತ್ತಲಿನ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿಗಳು ಹೇಳುತ್ತಿವೆ. ಮಾಲಿನ್ಯ ನಿಯಂತ್ರಣ ಸತ್ತುಹೋಗಿದೆ. ಅವರಿಗೆ ದೂರು ಕೊಟ್ಟರೆ ಕಂಪನಿ ಮಾಲೀಕರಿಂದ ಕಮಿಷನ್ ಪಡೆದು ಹಣ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಗೋಳು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ನಿತ್ಯ ತರಕಾರಿ, ಹಾಲು ಪೂರೈಸುವ ಜಿಲ್ಲೆಗಳ ಸಾಕಷ್ಟು ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗುತ್ತಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಕೈಗಾರಿಕೆಗಳು ಅನಿವಾರ್ಯವಾದರೂ, ಕೈಗಾರಿಕೆಗಳು ನಿರ್ಮಾಣವಾದರೆ ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಸುತ್ತಮುತ್ತಲಿನ ಜೀವಸಂಕುಲಕ್ಕೆ ಹಾನಿಯಾಗಲಿದೆ. ಉಸಿರಾಡುವ ಗಾಳಿ, ಕುಡಿಯುವ ನೀರು ವಿಷವಾಗಲಿದೆ ಎಂಬುದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.

ಮಾತಿಗೆ ತಪ್ಪಿದರೇ ಸಿಎಂ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದ ವೇಳೆ ಭೂಸ್ವಾಧೀನದ ವಿರುದ್ಧ ನಡೆಸುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು. “ಬಿಜೆಪಿ ಸರ್ಕಾರ ಭೂಸ್ವಾಧೀನ ನಿರ್ಧಾರ ಖಂಡಿಸಿ ರೈತರು ಧರಣಿ ಕುಳಿತ ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ. ಬಿಜೆಪಿ ಸರ್ಕಾರ ‘ಉಳುವವನೇ ಭೂಮಿ ಒಡೆಯ’ ಬದಲು ‘ಉಳ್ಳವನೇ ಭೂಮಿ ಒಡೆಯ’ ಎಂಬುದನ್ನು ಮಾಡಿದೆ. ಫಲವತ್ತಾದ ಕೃಷಿ ಭೂಮಿಗಳಲ್ಲಿ ಕೈಗಾರಿಕೆಗಳು ಮಾಡುವುದು ಸರಿಯಲ್ಲ. ಆದರೆ ಬಿಜೆಪಿ ಸರ್ಕಾರ ಫಲವತ್ತಾದ ಭೂಮಿಗಳನ್ನು ವಶಪಡಿಸಿಕೊಳ್ಳುತ್ತಿದೆ. ಕೈಗಾರಿಕೆ ಬೆಳವಣಿಗೆಯಾಗಬೇಕು ನಿಜ. ಆದರೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬಾರದು. ಫಲವತ್ತಾದ ಭೂಮಿ ಬಿಟ್ಟು ಬರಡು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕು. ಬಲಾತ್ಕಾರದಿಂದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಬಹಿರಂಗವಾಗಿ ಹೇಳಿದ್ದರು.
ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಸಿದ್ದರಾಮಯ್ಯ ಅವರೂ ಸ್ಪಂದಿಸಿಲ್ಲ. ಹೀಗಾಗಿ, ಮುಖ್ಯಮಂತ್ರಿ ಮಾತುಗಳನ್ನೇ ಮುಂದಿಟ್ಟುಕೊಂಡು ‘ತಮ್ಮನ್ನು ತಾವು ಮಾತಿಗೆ ತಪ್ಪದ ಮುಖ್ಯಮಂತ್ರಿ ಎಂದು ಸಾಬೀತುಪಡಿಸಿಕೊಳ್ಳಲಿ‘ ಎಂದು ರೈತರು ಈಗ ಆಗ್ರಹಿಸುತ್ತಿದ್ದಾರೆ. ಹೋರಾಟದ ಸಂದರ್ಭದಲ್ಲಿ ಭರವಸೆ ನೀಡಿದ ಜನಪ್ರತಿನಿಧಿಗಳು ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ. ಸಚಿವ ಕೆ.ಎಚ್.ಮುನಿಯಪ್ಪ ಮಾತಿಗೆ ತಪ್ಪಿ ನಡೆದಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಅವರ ಮಾತುಗಳು ಮುಖ್ಯವಾಗುತ್ತವೆ. ಸಿದ್ದರಾಮಯ್ಯ ಅವರು ವಿರೋಧಪಕ್ಷದಲ್ಲಿದ್ದಾಗ ಎಷ್ಟೇ ಆವೇಶದಿಂದ ಬಿಜೆಪಿ ವಿರುದ್ಧ ಮಾತನಾಡಿದ್ದರೂ ಕರಾರುವಾಕ್ಕಾಗಿ ಬಿಜೆಪಿ ಸರ್ಕಾರ ರೈತರಿಗೆ ನೀಡಿರುವ ಭೂಸ್ವಾಧೀನ ನೋಟಿಸ್‌ಗಳನ್ನು ನಾನು ಅಧಿಕಾರಕ್ಕೆ ಬಂದ ಮೇಲೆ ಹಿಂಪಡೆಯುತ್ತೇನೆ ಎಂದು ಭರವಸೆ ಕೊಟ್ಟಿರಲಿಲ್ಲ. ರೈತ ಪರವಾದ ಆಶಯ ಮಾತುಗಳನ್ನು ಹೇಳಿ ಬಂದಿದ್ದರು. ಇಲ್ಲಿಗೆ ಸಿದ್ದರಾಮಯ್ಯ ಅವರ ಜವಾಬ್ದಾರಿ ಮುಗಿಯಿತೇ?
ಕೆಐಎಡಿಬಿ ತನ್ನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ‘ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ’ ನಡೆಸುತ್ತಿರುವ ಧರಣಿ ದೇಶದಲ್ಲೇ ಅತೀ ದೊಡ್ಡಮಟ್ಟದ ಸುದೀರ್ಘ ಹೋರಾಟವಾಗಿದೆ. ರೈತರು ಸಿದ್ದರಾಮಯ್ಯ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕ್ರಾಂತಿ ಹೋರಾಟಕ್ಕೆ ರೈತರು ಮುಂದಾಗಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು. ಸೋಮವಾರ (ಡಿ.23) ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, “1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದರಿಂದ ಹೊಸದಾಗಿ ಭೂಸ್ವಾಧೀನ ನಡೆಸಬಾರದು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು” ಎಂದು ಶಾಂತಿಯುತವಾಗಿ ಮನವಿ ಸಲ್ಲಿಸಿದೆ.

ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ”430 ಎಕರೆ ಜಮೀನು ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ ಆಗಿರುವ ಜಮೀನು ವಾಪಸು ಪಡೆಯಲು ಸಾಧ್ಯವಿಲ್ಲ. ಸರ್ಕಾರ ರೈತರ ಪರವಾಗಿದ್ದು ಈ ವಿಷಯದ ಕುರಿತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಸಹ ಪಡೆದುಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ. ಇಲ್ಲಿಯೂ ಸಿದ್ದರಾಮಯ್ಯ ತಾಂತ್ರಿಕವಾಗಿಯೇ ಮಾತನಾಡಿದ್ದಾರೆ.
‘ಸಿದ್ದರಾಮಯ್ಯ ಒಮ್ಮೆ ಮಾತು ಕೊಟ್ಟರೆ ಅದನ್ನು ಹಿಂಪಡೆಯುವ ಸಾಧ್ಯತೆ ಬಹಳ ಕಡಿಮೆ. ತಮ್ಮ ಮನಃಸಾಕ್ಷಿಗೆ ಬದ್ಧರಾಗಿ ನಡೆದುಕೊಳ್ಳುವುದು ಅವರು ರೂಢಿಸಿಕೊಂಡ ರಾಜಕೀಯ ಜೀವನ’ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ಟಿಕೆಟ್ ವಿಚಾರದಲ್ಲಿ ತಾವು ಸೂಚಿಸಿದ ಅಭ್ಯರ್ಥಿಗಳು ಸೋಲುತ್ತಾರೆ ಎಂದು ವರದಿಗಳು ಹೇಳಿದಾಗಲೂ ಕೊಟ್ಟ ಮಾತಿಗೆ ನಡೆದುಕೊಳ್ಳಬೇಕು ಎಂದು ಟಿಕೆಟ್ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಸಚಿವರು, ಶಾಸಕರು ಮಾತನಾಡಿದಾಗ, “ಮಾತು ಕೊಟ್ಟಿದ್ದೇವೆ, ಆ ಪ್ರಕಾರ ನಡೆದುಕೊಳ್ಳಬೇಕು ಅಷ್ಟೇ” ಎಂದು ಹೇಳಿ ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದಾರೆ.
ಆದರೆ ಸಚಿವ ಸಂಪುಟ ಸಹೋದ್ಯೋಗಿ ‘ಆಪ್ತಮಿತ್ರರು‘ ಉದ್ಯಮಿಗಳ ಜೊತೆ ಮಾಡಿಕೊಂಡ ಒಳಒಪ್ಪಂದಗಳು ಸಿದ್ದರಾಮಯ್ಯ ಅವರ ಕೈ ಕಟ್ಟಿಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ‘ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿʼ ವಿಚಾರದಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡುತ್ತಿಲ್ಲ. ಇದೇ ರೈತ ಹೋರಾಟಗಾರರು ಹಿಂದೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದಾಗ, ”ನೀವು ಹೇಳಿದಹಾಗೆಲ್ಲ ಕೇಳೋಕಾಗಲ್ರೀ…!” ಎಂದು ಉದ್ಧಟತನ ತೋರಿ, ರೈತರನ್ನು ಅಪಮಾನಿಸಿದ್ದರು. ಅವರು ಈಗ ಸಿದ್ದರಾಮಯ್ಯರ ಪಕ್ಕದಲ್ಲೇ ಇದ್ದಾರೆ! ಚುನಾವಣೆ ಸಮಯದಲ್ಲಿ ರೈತರಿಗೆ ಭರವಸೆ ಕೊಟ್ಟು ಆಯ್ಕೆಯಾಗಿ ಬಂದ ಸಚಿವ ಕೆ ಎಚ್ ಮುನಿಯಪ್ಪ ಕೂಡ ರೈತರ ಕೈಗೆ ಸಿಗದಂತೆ ಓಡಾಡುತ್ತಿರುವುದಕ್ಕೆ ಉದ್ಯಮಿಗಳ ಜೊತೆಗಿನ ಶಾಮೀಲು ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಸ್ವಾಧೀನ ಪ್ರಕ್ರಿಯೆಯಿಂದ 387 ಕುಟುಂಬಗಳು ಸಂಪೂರ್ಣ ಭೂ ರಹಿತರಾಗಲಿದ್ದು, ಈ ಕುಟುಂಬಗಳಿಗೆ ಸೇರಿದ 2,989 ಜನಸಂಖ್ಯೆ ಭೂ ರಹಿತರಾಗಲಿದ್ದಾರೆ. ಇಲ್ಲಿನ ಸ್ಥಳೀಯ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರು ಬೀದಿಯಲ್ಲಿ ಕುಳಿತು ವರ್ಷಗಳೇ ಕಳೆದಿವೆ. ಕಾಂಗ್ರೆಸ್ ಸರ್ಕಾರ ಕೂಡ ಬೇಜವಾಬ್ದಾರಿ ರೈತ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಹೊರುವ ಬದಲು ನ್ಯಾಯಯುತವಾಗಿ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ಆಗ ಸಮಾಜವಾದಿ ಹಿನ್ನೆಲೆಯ, ಜನಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದಕ್ಕೆ ಮತ್ತಷ್ಟು ಹೊಳಪು ಸಿಗಲಿದೆ. ‘ರೈತರಿಂದ ಮಸಿ ಬಳಸಿಕೊಳ್ಳುವುದು‘ ಅಥವಾ ‘ಅನ್ನದಾತರ ಬದುಕನ್ನು ಹಸನಾಗಿಸುವುದು‘ ಎರಡೂ ಈಗ ಸಿದ್ದರಾಮಯ್ಯ ಅವರ ಕೈಯಲ್ಲೇ ಇದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.