ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತ ಗಮನಿಸಿದರೆ ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ರೈಲು ದುರಂತ ನಡೆದಿಲ್ಲ. ಈ ಘಟನೆಯ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಹೌರಾಕ್ಕೆ ಹೋಗುತ್ತಿದ್ದ ರೈಲು ಒಡಿಶಾದಲ್ಲಿ ಅಪಘಾತಕ್ಕೆ ಒಳಗಾಗಿದೆ. ಸೂಕ್ತ ತನಿಖೆ ನಡೆಸಿ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಹಾಗೂ ಅವರಿಗೆ ಅಗತ್ಯ ನೆರವನ್ನು ನೀಡುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಸೂಚಿಸಿದ್ದೇನೆ. ಈಗಾಗಲೇ ಅವರು ಘಟನಾ ಸ್ಥಳಕ್ಕೆ ವಿಮಾನದಲ್ಲಿ ಹೋಗಿದ್ದಾರೆ” ಎಂದರು.
“ಘಟನೆಯಲ್ಲಿ ರಾಜ್ಯದ ಪ್ರಯಾಣಿಕರು ಗಾಯಗೊಂಡ ಅಥವಾ ಪ್ರಾಣಹಾನಿ ಬಗ್ಗೆ ಯಾವುದೇ ಮಾಹಿತಿ ಸದ್ಯ ಸಿಕ್ಕಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಮುಖ್ಯಕಾರ್ಯದರ್ಶಿ ಅವರಿಗೂ ಸೂಚಿಸಿದ್ದೇನೆ. ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ನಾವು ಬದ್ಧರಿದ್ದೇವೆ” ಎಂದರು.