ಸೂಕ್ಷ್ಮ ಗಡಿ ರಾಜ್ಯವಾದ ಮಣಿಪುರದಲ್ಲಿ ಹಿಂಸಾಚಾರ ನಡೆದು ಶುಕ್ರವಾರಕ್ಕೆ (ಮೇ 3) ಒಂದು ವರ್ಷವಾಗಿದೆ. ಆದರೆ, ಈ ಒಂದು ವರ್ಷದ ಅವಧಿಯಲ್ಲಿ ಮೋದಿ ಅವರು ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅಲ್ಲಿನ ಜನರ ಸಂಕಷ್ಟಗಳನ್ನು ಕೇಳಿಲ್ಲ.
ಪ್ರಧಾನಿ ಮೋದಿ ಅವರು 2023ರ ಮೇ 3ರ ನಂತರ ಈವರೆಗೆ 162 ಬಾರಿ ದೇಶದ ನಾನಾ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, 14 ಬಾರಿ ವಿದೇಶಕ್ಎಕ ಭೇಟಿ ನೀಡಿದ್ದಾರೆ. ಆದರೆ, ಹೊತ್ತಿ ಉರಿದ, ನೂರಾರು ಜನರ ಸಾವು – ಸಾವಿರಾರು ಜನರ ನೋವಿನ ನಡುವೆಯೂ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ.
ಬಿಜೆಪಿಯೇ ಅಧಿಕಾರದಲ್ಲಿರುವ ಮಣಿಪುರದಲ್ಲಿ ಕಳೆದ ವರ್ಷ ಮೇ 3ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ಈವರೆಗೆ 230 ಮಂದಿ ಸಾವನ್ನಪ್ಪಿದ್ದಾರೆ. 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 60,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ತಮ್ಮ ಆಡಳಿತದಲ್ಲಿ ಭೀಕರ ದುರಂತವೊಂದು ನಡೆದರೂ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಮಾತ್ರವಲ್ಲ, ಸರ್ಕಾರದ ಯಾವುದೇ ಸಚಿವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿಲ್ಲ. ಯಾರೊಬ್ಬರೂ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿಲ್ಲ.
ಹಿಂಸಾಚಾರದಿಂದ ನೊಂದು-ಬೆಂದಿರುವ ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ಮೋದಿ ಅವರನ್ನು ವಿಪಕ್ಷಗಳು ಪ್ರತ್ನಿಸುತ್ತಲೇ ಇವೆ. ಇನ್ನು, ಮಣಿಪುರಕ್ಕೆ ಭೇಟಿ ನೀಡಿದ್ದ, ಸಂತ್ರಸ್ತ ಅಳಲು ಆಲಿಸಿದ್ದ ರಾಹುಲ್ ಗಾಂಧಿ, ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮಣಿಪುರದಿಂದಲೇ ಆರಂಭಿಸಿದ್ದರು. ಆದ್ರೆ, ಮಣಿಪುರದಲ್ಲಿ ದೇಶದ ಜವಬ್ದಾರಿ ಸ್ಥಾನದಲ್ಲಿರುವ ಮೋದಿ ಅವರ ಹಾಜರಿ ಶೂನ್ಯವಾಗಿದೆ.
ಮೇ 2023 ಮತ್ತು ಏಪ್ರಿಲ್ 2024ರ ನಡುವೆ, ಪ್ರಧಾನಿ ಮೋದಿ ಹೆಚ್ಚು ಬಾರಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪಿಎಂಒ ವೆಬ್‌ಸೈಟ್‌ನಿಂದ ಬಿಬಿಸಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಈ ಅವಧಿಯಲ್ಲಿ ಮೋದಿ ಅವರು ರಾಜಸ್ಥಾನಕ್ಕೆ 24 ಬಾರಿ ಭೇಟಿ ನೀಡಿದ್ದಾರೆ. ಮಧ್ಯಪ್ರದೇಶದಕ್ಕೂ 22 ಬಾರಿ ಭೇಟಿ ನೀಡಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಕಳೆದ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಪದೇ-ಪದೇ ಈ ರಾಜ್ಯಗಳಿಗೆ ಭೇಟಿ ನೀಡಿ, ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗ ಪ್ರಧಾನಿ ಮೋದಿ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದರು. ಕಳೆದಂದು ವರ್ಷದಲ್ಲಿ ಮೋದಿ ಕರ್ನಾಟಕಕ್ಕೆ 8 ಬಾರಿ ಭೇಟಿ ನೀಡಿದ್ದಾರೆ. ಅಲ್ಲದೆ, ಇದೇ ಅವಧಿಯಲ್ಲಿ ತಮ್ಮ ತವರು ರಾಜ್ಯ ಗುಜರಾತ್‌ಗೆ 10 ಬಾರಿ ಭೇಟಿ ನೀಡಿದ್ದಾರೆ. ಮಾತ್ರವಲ್ಲದೆ, ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ 17 ಬಾರಿ ಭೇಟಿ ನೀಡಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, 2024ರ ಫೆಬ್ರವರಿ-ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆದರೆ, ಮಣಿಪುರಕ್ಕೆ ಮಾತ್ರ ಭೇಟಿ ನೀಡಲಿಲ್ಲ. ಅವರು ಅಸ್ಸಾಂಗೆ ಮೂರು ಬಾರಿ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶಕ್ಕೆ ತಲಾ ಒಂದು ಭೇಟಿ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಗಾಂಧಿನಗರದಲ್ಲಿ ಅಮಿತ್ ಶಾ ಸ್ಪರ್ಧೆ; 16 ಮಂದಿ ನಾಮಪತ್ರ ವಾಪಸ್; ಬೆದರಿಕೆಯಿಂದ ಹಿಂದೆ ಸರಿದಿದ್ದೇವೆ ಎಂದ ಮೂವರು ಅಭ್ಯರ್ಥಿಗಳು
ಕಳೆದ ನವೆಂಬರ್‌ನಲ್ಲಿ ನಡೆದ ಐದು ರಾಜ್ಯಗಳ – ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್‌ಗಢ ಹಾಗೂ ಮಿಜೋರಾಂ – ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಮೋದಿ ಅವರು ನಾಲ್ಕು ರಾಜ್ಯಗಳಿಗೆ ಭೇಟಿ ನೀಡಿದ್ದರು. ಆದರೆ, ಮಣಿಪುರದ ಹಿಂಸಾಚಾರದಿಂದ ಸ್ಥಳಾಂತರಗೊಂಡ ಕುಕಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಮಣಿಪುರದ ಪಕ್ಕದ ರಾಜ್ಯ ಮಿಜೋರಾಂಗೆ ಹೋಗಲಿಲ್ಲ.
ರಾಜ್ಯಗಳ ಭೇಟಿಗಳು ಮಾತ್ರವಲ್ಲದೆ, 2023ರ ಮೇನಿಂದ 2024ರ ಏಪ್ರಿಲ್ ಅಂತ್ಯದ ನಡುವೆ ಮೋದಿ ಅವರು 14 ಅಂತರಾಷ್ಟ್ರೀಯ ಪ್ರವಾಸಗಳನ್ನು ಮಾಡಿದ್ದಾರೆ. ಅದರಲ್ಲಿ, ಯುಎಇಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಯಲ್ಲಿ ಭಾಗಿಯಾಗಿದ್ದೂ ಇದೆ. ಇಷ್ಟೆಲ್ಲ ಸುತ್ತಾಡಿರುವ ಮೋದಿ ಅವರಿಗೆ ಮಣಿಪುರ ಮಾತ್ರ ಕಾಣಿಸಿಲ್ಲ. ಅವರು ಮಣಿಪುರಕ್ಕೆ ಭೇಟಿ ನೀಡಿಲ್ಲ.