ಹರಿಯಾಣ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಆಡಳಿತಾರೂಢ ಬಿಜೆಪಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವಿನ ಹಾದಿಯಲ್ಲಿದೆ. ಗೆದ್ದೇಗೆಲ್ಲುತ್ತೇವೆಂಬ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುಂದಿದ್ದು, ನಿರಾಶೆಗೊಂಡಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಗೆಲುವಿನಿಂದ ಹೊರಗುಳಿಯಲು ಎಎಪಿಯೇ ಕಾರಣವೆಂದು ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
ಹರಿಯಾಣಕ್ಕೆ ಎಎಪಿ ಬಂದಿದ್ದೇ ಕಾಂಗ್ರೆಸ್‌ಅನ್ನು ದುರ್ಬಲಗೊಳಿಸಲು. ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಮೂಲಕ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ ಎಎಪಿ ವಿಶ್ವಾಸ ದ್ರೋಹ ಎಸಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸವಾಲು ಹಾಕಿದ್ದ, ಪ್ರತಿಭಟನೆ ನಡೆಸಿದ್ದ ವಿನೇಶ್ ಫೋಗಟ್ ಥರದವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾನಿ ಮಾಡುವುದಕ್ಕಾಗಿಯೇ ಎಎಪಿ ಹರಿಯಾಣ ಚುನಾವಣಾ ಕಣಕ್ಕೆ ಪ್ರವೇಶಿಸಿತ್ತು. ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಎಎಪಿಗೆ ಬಿಜೆಪಿಯನ್ನು ಸೋಲಿಸುವತ್ತ ಗಮನ ಇರಲಿಲ್ಲ ಎಂದು ಸ್ವಾತಿ ದೂರಿದ್ದಾರೆ.