ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಮುಂದಾಗಿದೆ.
ಮೇ 19 ರಂದು ಪರಿಚಯಿಸಲಾದ ಸುಗ್ರೀವಾಜ್ಞೆಯು ದೆಹಲಿಯಲ್ಲಿ ಗ್ರೂಪ್ ಎ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕದ ಪ್ರಾಧಿಕಾರವನ್ನು ರಚಿಸಿದೆ. ಈ ಕ್ರಮವನ್ನು ಎಎಪಿ ಸರ್ಕಾರವು ಸೇವೆಗಳ ನಿಯಂತ್ರಣದ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ವಂಚನೆ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜುಲೈ 3 ರಂದು ದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕೇಂದ್ರದ ಸುಗ್ರೀವಾಜ್ಞೆಯ ಪ್ರತಿಗಳನ್ನು ಸುಡಲಿದ್ದಾರೆ ಎಂದು ಎಎಪಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ರಾಜೀನಾಮೆ ಪತ್ರ ಹರಿದ ಬೆಂಬಲಿಗರು: ನಿರ್ಧಾರ ಬದಲಿಸಿದ ಮಣಿಪುರ ಸಿಎಂ
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರ ರಾಜಧಾನಿಯ 70 ವಿಧಾನಸಭಾ ಕ್ಷೇತ್ರಗಳಾದ್ಯಂತ ಸುಗ್ರೀವಾಜ್ಞೆಯ ಪ್ರತಿಗಳನ್ನು ಸುಡಲಾಗುವುದು. ಜುಲೈ 3 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವರು ಮತ್ತು ಎಲ್ಲ ಶಾಸಕರು ಪಕ್ಷದ ಕಚೇರಿಯಲ್ಲಿ ಸುಗ್ರೀವಾಜ್ಞೆಯ ಪ್ರತಿಗಳನ್ನು ಸುಡುತ್ತಾರೆ. ಜುಲೈ 6 ಮತ್ತು ಜುಲೈ 13 ರ ನಡುವೆ, ದೆಹಲಿಯ ಮೂಲೆ ಮೂಲೆಗಳಲ್ಲಿ ಸುಗ್ರೀವಾಜ್ಞೆಯ ಪ್ರತಿಗಳಿಗೆ ಬೆಂಕಿ ಹಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.
ಸೇವಾ ವಲಯಗಳಿಗೆ ಸಂಬಂಧಿಸಿ ಚುನಾಯಿತ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆನಂತರ ಕೇಂದ್ರ ಮೇ 19ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಆ ಪ್ರಕಾರ, ಗ್ರೂಪ್ ಎ ಹಂತದ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ನಿರ್ವಹಣೆಗಾಗಿ ಪ್ರಾಧಿಕಾರ ರಚಿಸಲಾಗಿದ್ದು, ವರ್ಗಾವಣೆ ಮತ್ತು ನಿಯೋಜನೆ ಅಧಿಕಾರವನ್ನು ಎಲ್.ಜಿ ಅವರಿಗೆ ನೀಡಲಾಗಿತ್ತು.