ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ತಕ್ಷಣವೇ ಶರಣಾಗುವಂತೆ ಸೂಚನೆ ನೀಡಿದೆ.
ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಜೈನ್ ಅವರು ಆರೋಗ್ಯದ ಕಾರಣ ನೀಡಿ ಜನವರಿ 17ರಂದು ಜಾಮೀನು ವಿಸ್ತರಣೆ ಪಡೆದಿದ್ದರು. ಇದೀಗ, ಮಧ್ಯಂತರ ಜಾಮೀನನ್ನು ರದ್ದುಗೊಳಿಸಿರವು ಸುಪ್ರೀಂ ಕೋರ್ಟ್, ತಕ್ಷಣವೇ ಶರಣಾಗುವಂತೆ ಸೂಚಿಸಿದೆ.
ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರಿದ್ದ ಪೀಠವು ಜಾಮೀನು ಅರ್ಜಿಯ ವಿಚಾರಣೆ ನಡೆಸಿದೆ. ಜೈನ್ ಅವರು ಅಸ್ವಸ್ಥರಾಗಿದ್ದಾರೆ. ಅವರಿಗೆ ಶರಣಾಗಲು ಕನಿಷ್ಠ ಒಂದು ವಾರ ಸಮಯ ನೀಡಬೇಕೆಂದು ಜೈನ್ ಪರ ವಕೀಲರು ಮನವಿ ಮಾಡಿದರು. ಆದರೆ, ಅವರ ಮನವಿಯನ್ನು ತಿರಸ್ಕರಿಸಿದ ಪೀಠ, ತಕ್ಷಣವೇ ಶರಣಾಗುವಂತೆ ಹೇಳಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕೊಳ್ಳಲಾಗಿದ್ದ ಜೈನ್ ಅವರು 2023ರ ಮೇ 26ರಂದು ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ, ಡಿಸೆಂಬರ್ 14ರಂದು ಜಾಮೀನನ್ನು ಜನವರಿ 8 ರವರೆಗೆ ವಿಸ್ತರಿಸಲಾಗಿತ್ತು.
ಜನವರಿ 17 ರಂದು, ಜೈನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಆರೋಗ್ಯ ಹದಗೆಡುತ್ತಿರುವ ಕಾರಣ ಅವರಿಗೆ ನಿಯಮಿತ ಜಾಮೀನು ನೀಡುವಂತೆ ಜೈನ್ ಅವರ ವಕೀಲರು ಮನವಿ ಮಾಡಿದ್ದರು. ಅಂದಿನಿಂದ ಈ ವರೆಗೆ ಅವರಿಗೆ ಜಾಮೀನು ವಿಸ್ತರಿಸಲಾಗಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮವಾಗಿ ಚರ ಆಸ್ತಿಗಳನ್ನು ಗಳಿಸಿದ್ದಾರೆ ಎಂಬ ಆರೋಪಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ದೂರಿನ ಆಧಾರದ ಮೇಲೆ ಇಡಿ ಜೈನ್ ವಿರುದ್ಧ ಪ್ರಕರಣ ದಾಖಲಿಸಿದೆ. ತಾವು ನಿರಪರಾಧಿ ಎಂದು ಪ್ರತಿಪಾದಿಸಿರುವ ಜೈನ್, ಈ ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ.