ಗಾಝಾದ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿ, ಸುಮಾರು 500ಕ್ಕೂ ಹೆಚ್ಚು ಜನರ ಬಲಿ ಪಡೆದುಕೊಂಡ ಘಟನೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜೊತೆಗಿನ ಸಭೆಯನ್ನು ಅರಬ್ ದೇಶಗಳ ನಾಯಕರು ರದ್ದುಗೊಳಿಸಿದ್ದಾರೆ.
ಗಾಝಾದ ಆಸ್ಪತ್ರೆಯೊಂದರ ಮೇಲೆ ವಾಯು ದಾಳಿ ನಡೆಸಿ, ಸುಮಾರು 500ಕ್ಕೂ ಹೆಚ್ಚು ಜನರ ಬಲಿ ಪಡೆದುಕೊಂಡ ಘಟನೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜೊತೆಗಿನ ಸಭೆಯನ್ನು ಅರಬ್ ದೇಶಗಳ ನಾಯಕರು ರದ್ದುಗೊಳಿಸಿರುವುದಾಗಿ ‘ಅಲ್-ಜಝೀರಾ’ ವರದಿ ಮಾಡಿದೆ.
ಅರಬ್ ನಾಯಕರು ಶೃಂಗಸಭೆಯನ್ನು ರದ್ದುಗೊಳಿಸಿರುವ ಬೆಳವಣಿಗೆಯು ಅಮೆರಿಕದ ಅಧ್ಯಕ್ಷರಿಗಾದ ದೊಡ್ಡ ಹಿನ್ನಡೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ. ಯುದ್ಧ ಈವರೆಗೆ ಮುಂದುವರೆಯಲು ಅಮೆರಿಕಾವು ಇಸ್ರೇಲ್‌ಗೆ ನೀಡಿದ ನೇರ ಬೆಂಬಲವೇ ಕಾರಣ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆರೋಪಿಸುತ್ತಿದ್ದಾರೆ.
ಇಸ್ರೇಲ್‌ಗೆ ಬೆಂಬಲ ಸೂಚಿಸುವುದಕ್ಕಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇಂದು ಇಸ್ರೇಲ್‌ಗೆ ಆಗಮಿಸುತ್ತಿದ್ದಾರೆ. ಇದರ ಮುನ್ನಾದಿನವೇ ಗಾಝಾದ ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ದಾಳಿಯಿಂದ 500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಇಸ್ರೇಲ್‌ನಿಂದ ಅಮಾನವೀಯ ಕೃತ್ಯ: ಆಸ್ಪತ್ರೆ ಮೇಲೆ ಬಾಂಬ್ ದಾಳಿ; 500ಕ್ಕೂ ಹೆಚ್ಚು ಮಂದಿ ಬಲಿ
ಈ ಘಟನೆಯ ಬೆನ್ನಲ್ಲೇ, ಜೋರ್ಡಾನ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಹೇಳಿಕೆ ನೀಡಿದ್ದು, ಈಜಿಪ್ಟ್ ಅಧ್ಯಕ್ಷ ಅಬುಲ್ ಫತ್ತಾಹ್ ಎಲ್-ಸಿಸ್ಸಿ ಮತ್ತು ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಜೋ ಬೈಡನ್ ನಡೆಸಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.
‘ಆಸ್ಪತ್ರೆ ಘಟನೆಗೆ ಹಮಾಸ್ ಕಾರಣ’ ಎಂದು ಆರೋಪಿಸಿದ ಇಸ್ರೇಲ್ ಪ್ರಧಾನಿ
ಈ ನಡುವೆ ಘಟನೆಯ ಬಗ್ಗೆ ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಝಾದ ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ನಡೆಸಿಲ್ಲ. ಈ ದುರಂತಕ್ಕೆ ಗಾಝಾದಲ್ಲಿನ ಹಮಾಸ್ ಅವರೇ ಹೊಣೆಗಾರರಾಗಿದ್ದಾರೆ. ಅವರು ಇಸ್ರೇಲ್ ಅನ್ನು ಗುರಿಯಾಗಿರಿಸಿ ಹಾರಿಸಿರುವ ರಾಕೆಟ್ ಆಸ್ಪತ್ರೆಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಓರ್ವ ಸುಳ್ಳುಗಾರ: ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ರಾಯಭಾರಿ
ಇಸ್ರೇಲ್ ಪ್ರಧಾನಿಯ ಹೇಳಿಕೆಯ ಬಗ್ಗೆ ಪತ್ರಕರ್ತರೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಓರ್ವ ಸುಳ್ಳುಗಾರ. ಈ ಆಸ್ಪತ್ರೆಯ ಸುತ್ತಲೂ ಹಮಾಸ್‌ನ ನೆಲೆ ಇದೆ ಎಂದು ಭಾವಿಸಿ ಇಸ್ರೇಲ್ ದಾಳಿ ಮಾಡಿದೆ ಎಂದು ಅವರ ಡಿಜಿಟಲ್ ವಕ್ತಾರನೋರ್ವ ಟ್ವೀಟ್ ಮಾಡಿದ್ದಾರೆ. ಆ ನಂತರ ಅವರು ಆ ಟ್ವೀಟ್ ಅನ್ನು ಅಳಿಸಿದ್ದಾರೆ. ಆ ಟ್ವೀಟ್‌ನ ಪ್ರತಿ ನಮ್ಮ ಬಳಿ ಇದೆ. ಈಗ ಅವರು ಕಥೆಯನ್ನು ಬದಲಾಯಿಸಿದ್ದಾರೆ. ಪ್ಯಾಲೆಸ್ತೀನಿಯನ್ನರನ್ನು ದೂಷಿಸಲು ಈ ಪ್ರಯತ್ನ ಎಂದು ಆಕ್ರೋಶ ಹೊರಹಾಕಿದ್ದಾರೆ.