- ರಾಜ್ಯ ಸರ್ಕಾರದ ವಿರುದ್ಧ ಮುಸ್ಲಿಂರ ಆಕ್ರೋಶ
- ಕಾನೂನು ಹೋರಾಟ ನಡೆಸಲು ತೀರ್ಮಾನ
ರಾಜ್ಯ ಸರ್ಕಾರ 2ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ಪಟ್ಟಿಯೊಳಗೆ ಮುಸ್ಲಿಂರಿಗೆ ನೀಡುತ್ತಿದ್ದ ಶೇ.4 ರಷ್ಟು ಮೀಸಲಾತಿಯನ್ನು ತೆಗೆದು ಹಾಕಿರುವುದಕ್ಕೆ ಮುಸ್ಲಿಂ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಬಿಜೆಪಿ ಸರ್ಕಾರವು ಶುಕ್ರವಾರ ನಡೆದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಮುಸ್ಲಿಂಮರಿಗೆ ನೀಡುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಸಮವಾಗಿ ಹಂಚಲು ತೀರ್ಮಾನಿದೆ.
ಇದರಿಂದಾಗಿ ಕರ್ನಾಟಕದ ಮುಸ್ಲಿಂಮರು ಆರ್ಥಿಕವಾಗಿ ದುರ್ಬಲವಾಗಿರುವ ಸಾಮಾನ್ಯ ವರ್ಗದವರಿಗೆ (EWS) ನೀಡಲಾಗಿರುವ ಶೇ.10 ಮೀಸಲಾತಿಯ ಒಳಗೆ ಸ್ಪರ್ಧಿಸುವಂತಾಗಿರುವುದರಿಂದ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಸರಣಿ ಸಭೆ ನಡೆಸಿರುವ ವಿವಿಧ ಭಾಗದ ಮುಸ್ಲಿಂ ಮುಖಂಡರು ಹಾಗೂ ಧರ್ಮ ಗುರುಗಳು ಸರ್ಕಾರದ ಕ್ರಮ ಖಂಡಿಸಿ, ಕಾನೂನಿನ ಮೂಲಕ ಹೋರಾಟ ನಡೆಸಲು ಪ್ರತಿಜ್ಞೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಮೀಸಲಾತಿ ಹಂಚಿಕೆ | ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ರಾಜಕೀಯ ಗಿಮಿಕ್: ಸಿದ್ದರಾಮಯ್ಯ ಕಿಡಿ
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಮುಸ್ಲಿಂ ಮುಖಂಡರೊಬ್ಬರು, “ರಾಜ್ಯದಲ್ಲಿ ಹಲವು ಮುಸ್ಲಿಂರು ಎಸ್ಸಿ ಮತ್ತು ಎಸ್ಟಿಗಳಿಗಿಂತ ಕೆಳಗಿದ್ದಾರೆ. ನಮ್ಮ ಧರ್ಮದವರ ಮೇಲೆ ದಿನೇ ದಿನೇ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಹೆಚ್ಚಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕರ್ನಾಟಕ ಸರ್ಕಾರವು ತೆಗೆದುಕೊಂಡಿರುವ ತೀರ್ಮಾನದ ವಿರುದ್ಧ ನಾವು ಬೀದಿಗೆ ಇಳಿದು ಹೋರಾಟ ಮಾಡದೇ, ರಸ್ತೆಯಲ್ಲಿ ಗಲಾಟೆ ಮಾಡದೇ ನಮ್ಮ ಹಕ್ಕುಗಳಿಗಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ” ಎಂದರು.