ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್ ಅವರು ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. “ಕುಮಾರಸ್ವಾಮಿಯವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಹೊರಿಸಿ, ಮೌಖಿಕವಾಗಿ ಬೆದರಿಸಿದ್ದಾರೆ. ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದ ವಿರುದ್ಧವೂ ಸಹ ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಅಂದಹಾಗೆ, ಸಾಯಿ ವೆಂಕಟೇಶ್ವರ ಅಕ್ರಮ ಪ್ರಕರಣದ ತನಿಖೆಯನ್ನು ಎಡಿಜಿಪಿ ಚಂದ್ರಶೇಖರ್ ನೇತೃತ್ವದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ಅವರು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸಾಲು-ಸಾಲು ಅರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ಕೇಂದ್ರ ಗೃಹ ಸಚಿವರಿಗೂ ಪತ್ರ ಬರೆದಿದ್ದಾರೆ. ಇದೆಲ್ಲವೂ ತನಿಖೆಯ ಹಾದಿ ತಪ್ಪಿಸಲು ಹಾಗೂ ಬೆದರಿಕೆ ಹಾಕಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಇದೀಗ, ಎಡಿಜಿಪಿ ಚಂದ್ರಶೇಖರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಸಂಪೂರ್ಣ ವಿವರ ಇಲ್ಲಿದೆ;
1. ಎಂ ಚಂದ್ರಶೇಖರ್ ಆದ ನಾನು ಕರ್ನಾಟಕ ಕೇಡರ್‌ನ 1998ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದು, ಪ್ರಸ್ತುತ ADGPಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೆಯೇ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ಐಜಿಪಿಯ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. 16/09/2013ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ SIT ತಂಡವನ್ನು ರಚಿಸಲಾಗಿದೆ.
2. ಹೆಚ್.ಡಿ.ಕುಮಾರಸ್ವಾಮಿ s./o ಎಚ್.ಡಿ.ದೇವೇಗೌಡ ಅಪರಾಧ ಸಂಖ್ಯೆ: 16/14 ಪಿಎಸ್ ಐ, ಕೆ.ಎಲ್.ಎ. ಈ ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸಿದ್ದಪಡಿಸಿದ ನಂತರ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಕಷ್ಟು ಸಾಕ್ಷಾಧಾರಗಳು ದೊರೆತಿದ್ದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಕರ್ನಾಟಕ ರಾಜ್ಯಪಾಲರಿಗೆ 21/11/2023 ಪತ್ರ ಬರೆದಿದ್ದರು. ರಾಜ್ಯಪಾಲರು ಈ ವರದಿಯನ್ನು ಪರಿಶೀಲಿಸಿ ಕೆಲವು ಸ್ಪಷ್ಟೀಕರಣಗಳನ್ನು ಕೋರಿ ಎಸ್‌ಐಟಿ ಗೆ 29/07/2024ರಂದು ಪತ್ರ ಬರೆದಿದ್ದರು. ಈ ಸ್ಪಷ್ಟೀಕರಣ ಮನವಿ ಪತ್ರವು ಎಸ್‌ಐಟಿಯನ್ನು ತಲುಪಿದ್ದು 08/08/24 ರಂದು.ಅಂದರೆ ಪತ್ರ ಬರೆದ 11 ದಿನಗಳ ನಂತರ. ರಾಜ್ಯಪಾಲರು ಕೇಳಿದ ಸ್ಪಷ್ಟೀಕರಣಕ್ಕೆ 19/08/2024 ರಂದು ಉತ್ತರಿಸಲಾಗಿದೆ. 29/08/2024 ರಂದು ಕಡತವನ್ನು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಲು ತಿಳಿಸಿದ್ದರು. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಎಸ್‌ಐಟಿಯು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
3. ಈ ನಡುವೆ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು, ಎಸ್‌ಐಟಿಯು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶದಿಂದ ವಿಚಲಿತರಾಗಿ, 28/09/2024 ಮತ್ತು 29/09/2024 ರಂದು ಸರಣಿ ಪತ್ರಿಕಾಗೋಷ್ಠಿ ನಡೆಸಿ ನನ್ನ ಬಗ್ಗೆ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳು ಹೊರಿಸಿದ್ದು, ಬೆದರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಆರೋಪಿಯಾಗಿರುವ ಪ್ರಕರಣಗಳನ್ನು ನಾನು ಮತ್ತು ಎಸ್‌ಐಟಿ ಮುಂದುವರಿಸದಂತೆ ತಡೆಯಲು ಇದನ್ನು ಮಾಡಲಾಗಿದೆ. ಆರೋಪಿಯು ತನ್ನ ವಿರುದ್ಧ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಹಳಿತಪ್ಪಿಸಲು ಯೋಜನೆ ಹೊಂದಿದ್ದು, ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಹಾಗೆಯೇ, ನನ್ನನ್ನು ಬೇರೆ ಕಡೆಗೆ ಟ್ರಾನ್ಸ್‌ಫರ್ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲದೇ ನನ್ನ ಮತ್ತು ನನ್ನ ಕುಟುಂಬದವರ ವಿರುದ್ಧವೂ ಸುಳ್ಳು ಆರೋಪ ಮಾಡಿ ಬೆದರಿಕೆಯೊಡ್ಡಿದ್ದಾರೆ. ಆರೋಪಿಯು ನನ್ನನ್ನು ಕರ್ನಾಟಕದಿಂದ ಸ್ಥಳಾಂತರಿಸುವುದಾಗಿ ಮತ್ತು ನನ್ನ ಕುಟುಂಬ ಸದಸ್ಯರಿಗೆ ತೊಂದರೆ ನೀಡುವುದಾಗಿ ಹೇಳುವ ಮೂಲಕ ನನಗೆ ಧಮ್ಕಿ ಹಾಕುತ್ತಿದ್ದಾರೆ. ಹೀಗೆ ನನ್ನ ಮತ್ತು ನನ್ನ ಕುಟುಂಬದವರಿಗೆ ಧಮ್ಕಿ ಹಾಕುವ ಮೂಲಕ ಆರೋಪಿರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. ಈ ಕೃತ್ಯವು ಸೆಕ್ಷನ್ 224 BNS 2023 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
4. ನಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು ದಾಖಲೆಗಳನ್ನು ಬಳಸಿಕೊಂಡು ಕರ್ನಾಟಕ ಕೇಡರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಹಾಗೆಯೇ ಈ ವಿಚಾರವನ್ನು ಕೇಂದ್ರ ಗೃಹ ಸಚಿವಾಲಯದ ಜೊತೆ ಚರ್ಚಿಸುವುದಾಗಿ ಬೆದರಿಕೆಯಾಗಿದ್ದಾರೆ. ಗೃಹ ಸಚಿವಾಲಯದ ಆದೇಶದಂತೆ ನಾನು 2013ರಲ್ಲಿ ಕರ್ನಾಟಕ ಕೇಡರ್‌ನ ಭಾಗವಾಗಿದ್ದೇನೆ. 28/09/2024 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ಈ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ದಾಖಲೆಗಳು ಇರುವುದಾಗಿ ಹೇಳಿದ್ದಾರೆ. ಅಷ್ಟೆ ಅಲ್ಲದೇ ನನ್ನ ಬ್ಯಾಕ್‌ಗ್ರೌಂಡ್ ಚೆಕ್ ಮಾಡುವ ಪ್ರಯತ್ನ ಮಾಡಿರುವುದಾಗಿಯೂ ಅವರು ಉಲ್ಲೇಖಿಸಿದ್ದಾರೆ. ತನಿಖಾಧಿಕಾರಿಗೆ ಆರೋಪಿಯಿಂದ ಬಹಿರಂಗ ಬೆದರಿಕೆಯೊಡ್ಡಿರುವ ಅವರು ಈ ದಾಖಲೆಗಳನ್ನು ಅಕ್ರಮವಾಗಿ ಪಡೆಯಲು ಅವರು ಕೇಂದ್ರ ಸಂಪುಟ ಸಚಿವ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಅದನ್ನು ತನಿಖೆ ಮಾಡಬೇಕು. ಕೇಂದ್ರ ಕ್ಯಾಬಿನೆಟ್ ಸಚಿವರಾಗಿರುವ ಈ ಆರೋಪಿ ತನ್ನನ್ನು ಬಳಸಿಕೊಂಡು ನನ್ನ ವೃತ್ತಿಜೀವನಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
5. ದಿನಾಂಕ: 21/08/2024 ರಂದು ಎಎನ್‌ಐ ಸುದ್ದಿಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿರುವಂತೆ, ಆರೋಪಿಗಳಾದ ಎಚ್.ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, 2023ರ ನವೆಂಬರ್‌ನಲ್ಲಿ ಎಸ್‌ಐಟಿಯು ಪ್ರಾಸಿಕ್ಯೂಷನ್ ಮಂಜೂರಾತಿಗಾಗಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ, “ಮನವಿ ಮಾಡಲಾಗಿದ್ದ ಪ್ರಕರಣದ ಸಂಪೂರ್ಣ ಅಧ್ಯಯನ ಮಾಡಿದ ನಂತರ ರಾಜ್ಯಪಾಲರು ಕಡತದ ಮೇಲಿನ ಸಹಿಗೆ ಸಂಬಂಧಿಸಿದಂತೆ ಕೆಲವು ವಿವಾದಗಳಿವೆ. ಆದ್ದರಿಂದ, ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿ ಬಳಿಕ, ಮನವಿ ಸಲ್ಲಿಸಲು ಸೂಚಿಸಿದ್ದಾರೆ” ಎಂದೂ ಉಲ್ಲೇಖಿಸಿದ್ದಾರೆ. ಅಂದರೆ, ಪ್ರಾಸಿಕ್ಯೂಷನ್ ಮಂಜೂರಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿಯು ಎಸ್‌ಐಟಿಗೆ ಸ್ಪಷ್ಟೀಕರಣವನ್ನು ಕೋರಿರುವ ನಿಖರವಾದ ವಿಷಯಗಳು ಆರೋಪಿಗೆ ತಿಳಿದಿವೆ ಎಂಬುದನ್ನು ಕೇಳಿ ನಾನು ಗಾಬರಿಗೊಂಡಿದ್ದೇನೆ.
ಸುದ್ದಿ ವರದಿಯ ಪ್ಯಾರಾ 2ರಲ್ಲಿ ಉಲ್ಲೇಖಿಸಿರುವಂತೆ 29/07/2024ರಂದು ರಾಜಭವನದಿಂದ ಕಳಿಸಿದ ಸ್ಪಷ್ಟೀಕರಣ ಪತ್ರವನ್ನು ದಿನಾಂಕ: 08/08/2024ರಂದು ಎಸ್‌ಐಟಿ ಕಚೇರಿ ಸ್ವೀಕರಿಸಿದೆ ಎಂಬ ಅಂಶವನ್ನು ಗಮನಿಸಿದರೆ, ಇದು ಮಹತ್ವದ ವಿಚಾರವಾಗಿದೆ. ಬೆಂಗಳೂರಿನ ರಾಜಭವನದ ಪತ್ರವು ಬೆಂಗಳೂರಿನಲ್ಲಿರುವ ಎಸ್‌ಐಟಿ ಕಚೇರಿಗೆ ತಲುಪಲು ಸುಮಾರು 11 ದಿನಗಳನ್ನು ತೆಗೆದುಕೊಂಡಿದೆ. ಇದು ಅನುಮಾನಾಸ್ಪದವಾಗಿದೆ. ಇಂತಹ ಸಮಯದಲ್ಲಿ, ಈ ಆರೋಪಿಯು ರಾಜಭವನದ ಪತ್ರದಲ್ಲಿ ಕೇಳಲಾಗಿರುವುದನ್ನು 21/08/2024 ರಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಲಜ್ಜವಾಗಿ ಪ್ರಸ್ತಾಪಿಸಿದ್ದಾರೆ.
ಅವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸಂಬಂಧಿಸಿದ ಪ್ರಕರಣ Cr.No.16/14ರ ದಾಖಲೆಗಳು ಮತ್ತು ಕಡತಗಳನ್ನು ಹೊಂದಿದ್ದಾರೆ. ತನಿಖಾಧಿಕಾರಿಗಳು ಆರೋಪಿಗಳ ವಿರುದ್ಧ ಸಾಕ್ಷ್ಯವಾಗಿ ಸಂಗ್ರಹಿಸಿದ ದಾಖಲೆಗಳ ಪ್ರತಿಗಳನ್ನು ಸಹ ಅವರು ತೋರಿಸಿತ್ತಾರೆ. ಇದೆಲ್ಲವೂ, ಆರೋಪಿಯು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಕ್ರಮವಾಗಿ ಪಡೆದಿರುವುದು ಮತ್ತು ತನಿಖೆಯನ್ನು ಹಾಳುಮಾಡುವ ಉದ್ದೇಶದಿಂದ ರಾಜ್ಯಪಾಲರು ಮತ್ತು ಎಸ್‌ಐಟಿ ನಡುವಿನ ಸಂವಹನವನ್ನು ಅಕ್ರಮವಾಗಿ ಪಡೆದಿರುವುದು ತೋರಿಸುತ್ತದೆ. ಆರೋಪಿಯ ಈ ನಡವಳಿಕೆ ಮತ್ತು ಕೃತ್ಯವು ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿ ಮತ್ತು ತನಿಖಾ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತದೆ. ಗೌರವಾನ್ವಿತ ನ್ಯಾಯಾಲಯಗಳಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು, ಅವರು ಅಧಿಕಾರಹೊಂದಿರುವ ಸಾರ್ವಜನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ತನಿಖಾ ಸಾಮಗ್ರಿಗಳನ್ನು ಪಡೆದು, ಅವುಗಳನ್ನು ಬಳಸಿಕೊಂಡು ತನಿಖೆ ಮಾಡುವವರ ಮೇಲೆಯೇ ಮುಕ್ತವಾಗಿ ಆರೋಪ ಮತ್ತು ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇದನ್ನು ಅನುಮತಿಸಿದರೆ ಕಾನೂನಿನ ನಿಯಮಕ್ಕೆ ಅತ್ಯಂತ ದೊಡ್ಡ ಹಾನಿಯಾಗುತ್ತದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಗಂಭೀರ ಅಪರಾಧಗಳ ತನಿಖೆಯ ಪವಿತ್ರತೆಯೂ ಹಾಳಾಗುತ್ತದೆ. ಮತ್ತು ಈ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯು ಉನ್ನತ ನ್ಯಾಯಾಲಯದಿಂದ ಮತ್ತೊಮ್ಮೆ ಮುಖಭಂಗಕ್ಕೊಳಗಾಗಿದೆ, ಸವಾಲಿಗೆ ಒಳಗಾಗಿದೆ. ಕಾನೂನಿನ ಆಳ್ವಿಕೆಯು ಮೇಲುಗೈ ಸಾಧಿಸಬೇಕು, ನಮ್ಮ ನ್ಯಾಯ ವಿತರಣಾ ವ್ಯವಸ್ಥೆಯನ್ನು ನಿರ್ಮಿಸಿದ ಮೂಲಭೂತ ತತ್ವವನ್ನು ಎತ್ತಿಹಿಡಿಯಬೇಕು. “ನೀವು ತುಂಬಾ ಎತ್ತರದಲ್ಲಿದ್ದೀರಿ ಎಂದು ಭಾವಿಸಿದ್ದರೆ, ಕಾನೂನು ನಿಮಗಿಂತಲೂ ಮೇಲಿದೆ” ಎಂಬುದನ್ನು ಅರ್ಥ ಮಾಡಿಸಬೇಕು. ಆರೋಪಿಗಳ ತಮ್ಮ ದುರ್ವರ್ತನೆಯನ್ನು ಸಾರ್ವಜನಿಕವಾಗಿ ತೋರಿಸುತ್ತಿದ್ದಾರೆ. ತನಿಖಾ ಸಾಮಗ್ರಿಗಳು ಮತ್ತು ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಪ್ರಕರಣದಲ್ಲಿ ಸಾಕ್ಷಿಯಾಗಿರುವವರು ಮತ್ತು ಸಾಕ್ಷ್ಯಾಧಾರಗಳನ್ನು ಮರೆಮಾಚಲು ಹಾಗೂ ಸಾಕ್ಷಿಗಳು ಆರೋಪಿಗಳ ವಿರುದ್ಧ ಸುಳ್ಳು ಹೇಳುವಂತೆ ಮಾಡಲು ಆರೋಪಿ ಯತ್ನಿಸುತ್ತಾರೆ. ತನಿಖಾ ದಾಖಲೆಗಳ ಬಗ್ಗೆ ಆರೋಪಿಯು ತನ್ನ ಎಲ್ಲ ಪತ್ರಿಕಾಗೋಷ್ಠಿಗಳಲ್ಲಿ ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಅವರು ಪ್ರಸ್ತಾಪಿಸುವ ಪ್ರತಿಯೊಂದು ಸಂಗತಿಯೂ ತನಿಖಾ ದಾಖಲೆಗಳಲ್ಲಿದೆ. ಆರೋಪಿಯು ಕೇಂದ್ರ ಸಂಪುಟ ಸಚಿವರಾಗಿ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನಿಖಾಧಿಕಾರಿಗಳಿಂದ ಪ್ರಕರಣದ ದಾಖಲೆಗಳನ್ನು ಅಕ್ರಮವಾಗಿ ಪಡೆದಿದ್ದರೆ, ಆ ಬಗ್ಗೆ ತನಿಖೆ ಮಾಡಬೇಕು.
6. ಅಮಾನತುಗೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಅವರಿಂದ ನಾನು ಹಣ ವಸೂಲಿ ಮಾಡಲು ಯತ್ನಿಸಿದ್ದೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ, 06/11/2023 ರಂದು ಮಾನ್ಯ ನ್ಯಾಯಾಲಯವು ಅಮಾನತುಗೊಂಡ ಪಿಎಲ್‌ಸಿ ದಾಖಲಿಸಿದ್ದ ದೂರನ್ನು ವಜಾಗೊಳಿಸಿದೆ ಎಂಬ ಸತ್ಯವನ್ನು ಈ ಆರೋಪಿ ಹೆಚ್.ಡಿ ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ, ಅಪ್ರಾಮಾಣಿಕತೆಯಿಂದ ಮುಚ್ಚಿಟ್ಟಿದ್ದಾರೆ. ಆದಾಗ್ಯೂ, ಅಮಾನತುಗೊಂಡಿರುವ ಕಿಶೋರ್ ಕುಮಾರ್ ವಿರುದ್ಧ ದಾಖಲಾಗಿರುವ ಸಿಆರ್ ನಂ. 234/2022 ಪ್ರಕರಣವು ಕಿಶೋರ್ ಕುಮಾರ್ ಅವರು ವರ್ತೂರಿನ ಪಿಎಸಿಎಲ್ ಜಮೀನುಗಳನ್ನು ಮಾನ್ಯ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ಮತ್ತು ಹಲವಾರು ಭೂಕಬಳಿಕೆ ಆರೋಪಗಳನ್ನು ಒಳಗೊಂಡಿದೆ.
7. ರೌಡಿ ಶೀಟರ್ ಶ್ರೀಧರ್ ನ್ಯಾಯಾಲಯದಲ್ಲಿ ನೀಡಿದ ದೂರಿನ ಆಧಾರದ ಮೇಲೆ ನನ್ನ ವಿರುದ್ಧವೂ ಕುಮಾರಸ್ವಾಮಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಮತ್ತು, ಈ ಆರೋಪಿಯು ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ರೌಡಿ ಶೀಟರ್ ನೀಡಿದ ದೂರು “ಕಾನೂನಿನ ಪ್ರಕ್ರಿಯೆಯ ದುರುಪಯೋಗ” ಎಂಬ ಆಧಾರದ ಮೇಲೆ ಕೆಳಹಂತದ ನ್ಯಾಯಾಲಯದ ವಿಚಾರಣೆಗೆ ಮಾನ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಆರೋಪಿ ಎಚ್.ಡಿ ಕುಮಾರಸ್ವಾಮಿ ಅವರು ನ್ಯಾಯಾಲಯದ ಆದೇಶದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರೂ, ರೌಡಿ ಶೀಟರ್ ಶ್ರೀಧರ್ ಮತ್ತು ಅಮಾನತುಗೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಕೆ ಕಿಶೋರ್ ಕುಮಾರ್ ಜತೆ ಶಾಮೀಲಾಗಿ ವಾಸ್ತವಾಂಶಗಳನ್ನು ಮುಚ್ಚಿಟ್ಟು, ನನಗೆ ಬೆದರಿಕೆ ಹಾಕಲು ಮತ್ತು ನಾನು ಎಸ್‌ಐಟಿ ಮುಖ್ಯಸ್ಥನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯಲು ಉದ್ದೇಶಪೂರ್ವ ಸಂಪೂರ್ಣ ಸುಳ್ಳು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.
8. ನನ್ನ ಪತ್ನಿಯ ಹೆಸರಿನಲ್ಲಿ ಮಳೆನೀರು ಚರಂಡಿ ಮೇಲೆ ಬಹುಮಹಡಿ ಕಟ್ಟಡ ಕಟ್ಟುತ್ತಿದ್ದೇನೆ ಎಂದೂ ಈ ಆರೋಪಿ ಆರೋಪಿಸಿದ್ದಾರೆ. ಅತ್ಯಂತ ಕೆಟ್ಟ ಕ್ರಿಮಿನಲ್‌ಗಳು ಮತ್ತು ಪಾಪಿಗಳು ಕೂಡ ಮಹಿಳೆಯರು ಮತ್ತು ಮಕ್ಕಳನ್ನು ತಮ್ಮ ಹಗೆತನದಿಂದ ದೂರವಿಡುತ್ತಾರೆ. ಆದರೆ, ಈ ಆರೋಪಿಯು ನನ್ನ ಹೆಂಡತಿಯ ಮೇಲೆ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಇದು ಆತನ ಹತಾಶೆಯನ್ನು ಬಿಂಬಿಸುತ್ತದೆ. ಆದಾರೆ, ಈ ಆರೋಪ ಸಂಪೂರ್ಣ ಸುಳ್ಳು ಮತ್ತು ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಮಾಡಲಾಗಿದೆ.
9. ಅವರು ಆರೋಪಿಯಾಗಿರುವ ಪ್ರಕರಣಗಳ ತನಿಖೆಯಲ್ಲಿ ನನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಇತರ ಸುಳ್ಳು ಮತ್ತು ‘ಹಿಟ್ ಅಂಡ್ ರನ್’ ಆರೋಪಗಳು ಹಾಗೂ ಬೆದರಿಕೆಗಳನ್ನು ಹಾಕಿದ್ದಾರೆ.
10. ಕೇಂದ್ರ ಸಚಿವರಾಗಿ ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆದಿದ್ದೇನೆ. ಈ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ. ಪತ್ರದ ವಿಷಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಈ ಪತ್ರದಲ್ಲಿ ದಿನಾಂಕ: 29/09/2024 ರಂದು ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಲಾಗಿದ್ದು, ಆರೋಪಿ ಹೆಚ್.ಡಿ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಕ್ರಮ ಜರುಗಿಸಲು ಕೋರಿದ್ದಾರೆ. ಅವರು ನನ್ನ ನೇತೃತ್ವದ ಎಸ್‌ಐಟಿ ತನಿಖೆಯಲ್ಲಿರುವ ಪ್ರಕರಣಗಳಲ್ಲಿ ತಾವು ಆರೋಪಿಯಾಗಿದ್ದಾರೆ ಎಂಬ ಅಂಶವನ್ನು ಪತ್ರದಲ್ಲಿ ಮುಚ್ಚಿಟ್ಟಿದ್ದಾರೆ. ಒಬ್ಬ ಕೇಂದ್ರ ಸಚಿವರಿಂದ ಮತ್ತೊಬ್ಬ ಕೇಂದ್ರ ಸಚಿವರಿಗೆ ಬರೆದಿರುವ ಈ ಪತ್ರವನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ. ಆ ಮೂಲಕ, ನನ್ನನ್ನು ಬೆದರಿಸಲು ಮತ್ತು ಆರೋಪಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧದ ಈ ಪ್ರಕರಣಗಳ ತನಿಖೆಯನ್ನು ಮುಂದುವರಿಸದಂತೆ ನನ್ನನ್ನು ತಡೆಯುವ ಉದ್ದೇಶವು ಅದರ ಹಿಂದಿದೆ.
11. ಹೆಚ್.ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ದಿನಾಂಕ: 29/09/2024 ರಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳ (ಕುಮಾರಸ್ವಾಮಿ) ಆಜ್ಞೆಯ ಮೇರೆಗೆ ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ.
12. ಎಚ್ ಡಿ ಕುಮಾರಸ್ವಾಮಿ ಅವರ ಸಹವರ್ತಿ ಸುರೇಶ್ ಬಾಬು ಅವರು ನನ್ನ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ತಪ್ಪು ಮಾಹಿತಿ ನೀಡಿದ್ದೇ ಅಲ್ಲದೇ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಬೆದರಿಸುವ ಉದ್ದೇಶದಿಂದ ತಕ್ಷಣ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಬೆದರಿಸುವ ಉದ್ದೇಶದಿಂದ ಕುಮಾರಸ್ವಾಮಿ ಬೆಂಬಲಿಗರು ನನ್ನನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಧರಣಿ , ಪ್ರತಿಭಟನೆ ನಡೆಸಿದ್ದಾರೆ.
13. ಆರೋಪಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಮತ್ತು ಅವರ ಬೆಂಬಲಿಗರು ಸರಣಿ ಸುಳ್ಳು ಆರೋಪಗಳನ್ನು ಮಾಡಿ ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ನನ್ನ ವ್ಯಕ್ತಿತ್ವ ಮತ್ತು ವೃತ್ತಿ ಘನತೆಗೆ ಧಕ್ಕೆ ತಂದಿದ್ದಾರೆ. ಇದು ಆರೋಪಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧದ ಪ್ರಕರಣದ ತನಿಖೆ ನಡೆಸದಂತೆ ನನ್ನನ್ನು ಮತ್ತು ನನ್ನ ತಂಡವನ್ನು ತಡೆಯುವ ಉದ್ದೇಶ ಹೊಂದಿದೆ. ಇದು ನಮ್ಮ ತಂಡವನ್ನು ಕುಗ್ಗುವಂತೆ ಮಾಡಿದೆ. ನನ್ನ ತಂಡವನ್ನು ಕುಗ್ಗದಂತೆ ಪ್ರೇರೇಪಿಸಲು ನಾನು ಪತ್ರ ಬರೆದಿದ್ದೆ. ಸುಳ್ಳು ಮತ್ತು ಹಿಂಟ್ ಅಂಡ್ ರನ್ ತರಹದ ಆರೋಪಗಳನ್ನು ಮಾಡುವುದು ಸುಲಭ. ಆದರೆ ಅದರಿಂದ ಹೊರ ಬರುವುದು ತ್ರಾಸದಾಯಕ ಮತ್ತು ಬಹಳ ಸಮಯ ಬೇಕಾಗುತ್ತದೆ ಎಂಬುದನ್ನು ಈ ಅಗ್ನಿ ಪರೀಕ್ಷೆಯಿಂದ ಕಂಡುಕೊಂಡೆ. ಆರೋಪಿ ಎಚ್ ಡಿ ಕುಮಾರಸ್ವಾಮಿ ಅವರು ಬಹುಷಃ ಅಕ್ರಮವಾಗಿ ದಾಖಲೆಗಳನ್ನು ಪಡೆಯಲು ಮತ್ತು ಈ ಪ್ರಕರಣದ ತನಿಖೆಯನ್ನು ಕೆಡಿಸಲು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ಎಲ್ಲಾ ಶಕ್ತಿಯನ್ನು ಬಳಸುತ್ತಿದ್ದಾರೆ.
ಕುಮಾರಸ್ವಾಮಿ ಅವರು ತಮ್ಮ ಎಂದಿನ ಅಭ್ಯಾಸದಂತೆ ಕೆಟ್ಟದಾಗಿ, ಬೆದರಿಸುವ ಆರೋಪಗಳನ್ನು ಮಾಡಿದಾಗ ನಮ್ಮ ತಂಡಕ್ಕೆ ಎರಡೇ ಆಯ್ಕೆಗಳಿದ್ದವು. ಒಂದು ಸರೆಂಡರ್ ಆಗಿ ಬಿಡುವುದು, ನಮಗೆ ಮತ್ತು ನಮ್ಮ ಕುಟುಂಬಗಳಿಗೆ ಅವಮಾನಿಸದೇ ಶಾಂತಿಯಿಂದ ಬದುಕಲು ಬಿಡಿ ಎಂದು ಬೇಡುವುದು. ಯಾಕೆಂದರೆ ಆರೋಪಿ ಪ್ರಬಲ ರಾಜಕಾರಣಿ, ಕೇಂದ್ರ ಸಚಿವ. ಆದರೆ ನಾವು ಎದ್ದು ನಿಂತು ಎದುರಿಸುವ ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಂಡೆವು. ಯತೋ ಧರ್ಮಸ್ತತೋ ಜಯಃ. ಧರ್ಮ ಇದ್ದಲ್ಲಿ ಜಯ ಇರುತ್ತದೆ.
14. ಆರೋಪಿ ಪ್ರಭಾವಿ ರಾಜಕಾರಣಿ ಮತ್ತು ಕೇಂದ್ರ ಸಚಿವನಾಗಿರುವ ಕಾರಣ ತನಿಖಾಧಿಕಾರಿಗಳು ಬೆದರಿಸಲು ಮತ್ತು ತನಿಖೆಯನ್ನು ಹಾಳುಗೆಡವಲು ಬಿಡಬೇಕೆ? ಈ ನಿಟ್ಟಿನಲ್ಲಿ ನಾನು ಮಾರ್ಟಿನ್ ಲೂಥರ್ ಕೀಮಗ್ ಅವರನ್ನು ಹೇಳಿಕೆಯನ್ನು ಉಲ್ಲೇಖಿಸಲು ಬಯಸುತ್ತೇನೆ. “ಅನ್ಯಾಯ ಎಲ್ಲೆಡೆ ಇರುವಾಗ ನ್ಯಾಯಕ್ಕೆ ಬೆದರಿಕೆ ಇರುತ್ತದೆ. ಹಾಗಂತ ಅದನ್ನು ಪರಿಶೀಲಿಸದೇ ಬಿಟ್ಟರೆ ಈ ಲಜ್ಜೆಗೆಟ್ಟ ವರ್ತನೆ ಮತ್ತು ತಂತ್ರಗಳು ಬೇರೆ ಆರೋಪಿಗಳಿಗೂ ಮಾದರಿಯಾಗುವ ಅಪಾಯವಿದೆ. ಹಾಗಾಗಿ ತನಿಖೆಗೆ ಅಡ್ಡಿಪಡಿಸುವ ಅಕ್ರಮದ ಆರೋಪಿಗಳ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು.