‘ದ್ವಂದಾಲೋಚನೆ ಎಂದರೆ ಏಕಕಾಲದಲ್ಲಿ ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಸ್ವೀಕರಿಸುವುದು. ಬುದ್ಧಿಜೀವಿಗೆ ಯಾವ ದಿಕ್ಕಿನಲ್ಲಿ ತನ್ನ ಸ್ಮರಣೆಯನ್ನು ಬದಲಿಸಬೇಕೆಂದು ಗೊತ್ತಿರುತ್ತದೆ. ಅದ್ದರಿಂದ ವಾಸ್ತವದೊಡನೆ ತಾನು ಆಟವಾಡುತ್ತಿರುವುದಾಗಿಯೂ ಅವನಿಗೆ ತಿಳಿದಿರುತ್ತದೆ’ ಎಂದು ಬರೆಯುತ್ತಾನೆ ಅರ್ವೆಲ್. ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ ಲೋಕದ ವಿದ್ವಾಂಸರು ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.
ಈ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರು ಇಂದು ಕಾಂಗ್ರೆಸ್‌ನ ಕಚೇರಿಯಲ್ಲಿ ಕಾಂಗ್ರೆಸ್ ಮಂತ್ರಿಗಳು, ಮುಖಂಡರ ಮುಂದೆ ಎದ್ದು ನಿಂತು ವರದಿ ಒಪ್ಪಿಸುವುದನ್ನು ನೋಡಿದಾಗ ಅರ್ವೆಲ್‌ನ ಮೇಲಿನ ಮಾತುಗಳು ಪದೇ ಪದೇ ನೆನಪಾಗುತ್ತದೆ.
ಈ ಅಧ್ಯಕ್ಷರುಗಳ ಈ ಅನೈತಿಕ ನಡೆಯಿಂದ ಸಾಂಸ್ಕೃತಿಕ ಲೋಕ ಅಧಃಪತನಕ್ಕೆ ತಲುಪಿದೆ. ಅಕಾಡೆಮಿ, ಪ್ರಾಧಿಕಾರ ಎಲ್ಲವೂ ಆಡಳಿತ ಪಕ್ಷದ ಕೃಪಾ ಪೋಷಿತ ಎನ್ನುವುದು ನಿಜವಾದರೂ ಸಹ ನಾನು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ನೋಡಿ ಎಂದೆಲ್ಲಾ ಬಡಬಡಿಸಿದವರು ಇಂದು ಇಂತಹ ದುರಂತಕ್ಕೆ ತಲುಪಿದ್ದಾರೆ. ಇವರು ಈ ಪ್ರಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ನಡೆಸುತ್ತಾರೆ, ಆದರೆ ಬಹಿರಂಗ ಟೀಕೆಗೆ ಒಳಗಾಗಿಲ್ಲ ಎಂದು ಬಿಂಬಿಸಲು ಅಪ್ರಜ್ಞಾಪೂರ್ವಕವಾಗಿರುತ್ತಾರೆ.
ಅರ್ವೆಲ್ ಹೇಳಿದಂತೆ ಮುಂದುವರಿದು ಸುಳ್ಳು ಹೇಳುತ್ತಾ ಅದನ್ನು ನಂಬಿಸುವುದು, ಮುಜುಗರದ ಸಂಗತಿಗಳನ್ನು ಮರೆಸುವುದು ಮುಂದುವರಿಸುತ್ತಾರೆ. ಈ ರೀತಿಯ ವರ್ತನೆಯಿಂದ ಸಾಂಸ್ಕೃತಿಕ ಪ್ರತಿರೋಧ ಮತ್ತು ಕಟ್ಟುವಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗುತ್ತದೆ
ಅಕಾಡೆಮಿ, ಪ್ರಾಧಿಕಾರ ಗಳನ್ನು ಕಾಂಗ್ರೆಸ್ ಪಕ್ಷದ ಶಾಖೆಗಳು ಎಂಬಂತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ವಿದ್ವಾಂಸರಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರಯತ್ನಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಅಲ್ಲಿದ್ದವರು ಇದನ್ನು ಕೇಳಿಕೊಂಡು ತಲೆದೂಗಿದರೇ? ಮೌನ ಸಮ್ಮತಿ ವ್ಯಕ್ತಪಡಿಸಿದರೇ?
ವ್ಯವಸ್ಥೆಯ ಅಸಮಾನತೆ ಮತ್ತು ತಾರತಮ್ಯ ಧೋರಣೆ ವಿರುದ್ಧ ನಿರಂತರವಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಪ್ರಗತಿಪರ ಲೇಖಕರು ಯಾವ ಮೇಲ್ಪಂಕ್ತಿ ಹಾಕಿ ಕೊಡುತ್ತಿದ್ದಾರೆ? ಸರ್ವವೂ ಅನುಕೂಲಕರ ಸ್ಥಿತಿಯಲ್ಲಿ ರಬೇಕೆಂದು ಬಯಸುವ ಮನಸ್ಥಿತಿ ಇಲ್ಲಿ ಕಂಡುಬರುತ್ತದೆ. ಇಲ್ಲದೇ ಹೋದರೆ ‘ಸ್ವಾಮಿ ನಾವು ವಿದ್ವಾಂಸರು ಸ್ವತಂತ್ರ ವ್ಯಕ್ತಿತ್ವ ಉಳ್ಳವರು, ನಿಮ್ಮ ಪಕ್ಷದ ಕಚೇರಿಯ ನಡೆಸುವ ಸಭೆಗೆ ಬರುವುದಿಲ್ಲ’ ಎಂದು ದಿಟ್ಟತನದಿಂದ ಮಾತನಾಡುತ್ತಿದ್ದರು. ಸತ್ಯದ ನಿಲುವನ್ನು ಅರಿಯದೇ ಹೋದರೆ ಅವರು ಯಾವುದೇ ಬಗೆಯ ಚಲನಶೀಲತೆ, ಕ್ರಿಯಾಶೀಲತೆಯ ಸಾಂಸ್ಕೃತಿಕ ಲೋಕವನ್ನು ಕಟ್ಟಲಾರರು.