- ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನದಲ್ಲಿ ಬಿಜೆಪಿ ಗೆಲ್ಲಿಸಿ
- ಐದು ಭರವಸೆ ಕಾರ್ಯರೂಪಕ್ಕೆ ತನ್ನಿ, ಇಲ್ಲ ಅಧಿಕಾರ ಬಿಟ್ಟು ತೊಲಗಿ
ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಬಿಜೆಪಿ ಅಧಿಕಾರ ಪಡೆಯುವಂತೆ ಮಾಡಿ. ನರೇಂದ್ರ ಮೋದಿಯವರು ಬೆಂಗಳೂರಿಗೆ ನೀಡುವ ಕೊಡುಗೆಗಳನ್ನು ಪ್ರಚಾರದಲ್ಲಿ ಸರಿಯಾಗಿ ಬಳಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಸಲಹೆ ನೀಡಿದರು.
ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕೇಂದ್ರ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಕೊಟ್ಟ ಗ್ಯಾರಂಟಿಗಳನ್ನು ಜನರು ನಂಬಿದ್ದರು. ಇದರ ಪರಿಣಾಮವಾಗಿ ನಮಗೆ ಹಿನ್ನಡೆ ಆಗಿದೆ. ಕಾಂಗ್ರೆಸ್ಸಿಗರು ನೀಡಿದ ಐದು ಭರವಸೆಗಳನ್ನು ನೂರಕ್ಕೆ ನೂರು ಚಾಚೂತಪ್ಪದೆ ಕಾರ್ಯರೂಪಕ್ಕೆ ತರಬೇಕು; ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ ಎಂದು ಎಚ್ಚರಿಸಿದರು.
ವಿಧಾನಸಭೆ ಒಳಗೆ ನಮ್ಮ ಶಾಸಕರು ಹೋರಾಡುತ್ತಾರೆ. ಸದನದ ಹೊರಗೆ ನಾವು ಸಾವಿರಾರು ಜನರು ಗಾಂಧಿ ಪ್ರತಿಮೆ ಕೆಳಗೆ ಕುಳಿತು ಅಧಿವೇಶನ ಮುಗಿಯುವವರೆಗೂ ಹೋರಾಟ ಮಾಡಬೇಕು. ಪ್ರಧಾನಿ ಮೋದಿಜಿ ಕೊಡುವ 5 ಕೆ.ಜಿಗೆ ಕಾಂಗ್ರೆಸ್ಸಿನ 10 ಕೆ.ಜಿ ಅಕ್ಕಿ ಸೇರಿಸಿ ಪ್ರತಿಯೊಬ್ಬರಿಗೆ 15 ಕೆಜಿ ನೀಡಲು ಒತ್ತಾಯಿಸಬೇಕು. ಈ ಹೋರಾಟದಲ್ಲಿ ನಾನು ಭಾಗವಹಿಸುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಭರವಸೆ ನೀಡಿ ಅಧಿಕಾರ ಮದದಿಂದ ಈಗ ಮೋದಿಜಿ ಅವರ ಕಡೆ ತೋರಿಸುತ್ತಿದ್ದಾರೆ. ಮೋದಿಯವರು ಉಚಿತವಾಗಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದರೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿಗರು ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುವಂತೆ ಹೋರಾಟ ಮಾಡಿ ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ ಎಂದು ಕರೆನೀಡಿದರು.
ಇಡೀ ವಿಶ್ವವೇ ಕೊಂಡಾಡುವ ಬಿಹಾರದ ಪಾಟ್ನಾದಲ್ಲಿ 18 ಪಕ್ಷಗಳು ಸಭೆ ಸೇರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದೆಂಬ ಸಂಕಲ್ಪ ಮಾಡಿದ್ದಾರೆ. 18 ಪಕ್ಷಗಳ ಮುಖಂಡರು ಪ್ರಾಮಾಣಿಕರೇ ಆಗಿದ್ದರೆ ಇಂಥ ಸಂಕಲ್ಪ ಮಾಡುತ್ತಿರಲಿಲ್ಲ. ಅದರ ಬದಲಾಗಿ ಅವರನ್ನು ಬೆಂಬಲಿಸಬೇಕಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋದಿಜಿ ಅವರ ನೇತೃತ್ವದಲ್ಲಿ 300ರಷ್ಟು ಲೋಕಸಭಾ ಸೀಟುಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಬಡವರು ಹಸಿವಿನಿಂದ ಸಾಯಲಿ ಎಂದು ಕೇಂದ್ರ ಅಕ್ಕಿ ಕೊಡುತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಈ ಗುರಿ ಈಡೇರಿಸಲು ಸಾಧ್ಯವಿದೆ ಎಂದು ನುಡಿದರು.
ತಂಡದ ಸಂಚಾಲಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಸಂಸದ ಪಿ ಸಿ ಮೋಹನ್, ಮಾಜಿ ಸಚಿವ ಗೋವಿಂದ ಕಾರಜೋಳ, ಡಾ. ಸಿ ಎನ್ ಅಶ್ವತ್ಥನಾರಾಯಣ, ಶಾಸಕರಾದ ಸುರೇಶ್ಕುಮಾರ್, ಮುನಿರತ್ನ, ಕೋಶಾಧ್ಯಕ್ಷ ಸುಬ್ಬನರಸಿಂಹ, ಜಿಲ್ಲಾಧ್ಯಕ್ಷ ಮಂಜುನಾಥ್ ಸಭೆಯಲ್ಲಿ ಹಾಜರಿದ್ದರು.