ಮಾಜಿ ಸಂಸದ ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪಿ ಐಶ್ವರ್ಯಗೌಡ ಅವರು ತಮಗೆ ಮಾಜಿ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಹತ್ತಿರದ ಪರಿಚಯಸ್ಥರು ಎಂದು ಹೇಳಿಕೊಂಡಿದ್ದಾರೆ.
ಪೊಲೀಸರ ತನಿಖೆಯಲ್ಲಿ ಒಂದೊಂದಾಗಿ ಬೆಳಕಿಗೆ ಬಂದಿದೆ. ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ದರೆ ನನಗೆ ಹೇಳಿ, ನಾನು ಸಹಾಯ ಮಾಡುವೆ ಎಂದು ಐಶ್ವರ್ಯಗೌಡ ಹೇಳಿ ನಮ್ಮನ್ನು ನಂಬಿಸಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಅಲ್ಲದೇ ಹಣ ಪಡೆಯುವ ಮುನ್ನ ನಾನು ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಮಹಿಳೆಯೊಬ್ಬರಿಗೆ 3.25 ಕೋಟಿ ರೂ ವಂಚಿಸಿರುವ ಪ್ರಕರಣವನ್ನು ತನಿಖೆಯನ್ನು ತೀವ್ರಗೊಳಿಸಿರುವ ರಾಜರಾಜೇಶ್ವರಿನಗರ ಪೊಲೀಸರು, ಸರ್ಚ್ ವಾರೆಂಟ್ ಪಡೆದು ನಿನ್ನೆ ಆರೋಪಿ ಐಶ್ವರ್ಯ ಗೌಡ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
3.25 ಕೋಟಿ ರೂ. ಹಾಗೂ 430 ಗ್ರಾಂ ಚಿನ್ನಾಭರಣ ವಂಚಿಸಿರುವುದಾಗಿ ಆರೋಪಿಸಿ ಶಿಲ್ಪಾ ಗೌಡ ಎಂಬವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಐಶ್ವರ್ಯ ಗೌಡ ಮನೆ ಶೋಧಿಸಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದು, ಗುರುವಾರ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಆರ್.ಆರ್.ನಗರದ ಶಿಲ್ಪಾಗೌಡ ಅವರಿಗೆ, ವಂಚನೆ ಎಸಗಿದ ಸ್ಥಳ ತೋರಿಸಬೇಕು, ಸಾಕ್ಷಿದಾರರನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಇನ್ನೆರಡು ದಿನದೊಳಗೆ ಬಂದು ಹಾಜರುಪಡಿಸಲು ಪೊಲೀಸರು ನೋಟಿಸ್ ನೀಡಿದ್ದಾರೆ.
ಹೈಕೋರ್ಟ್ ಮೊರೆ
ವಾರಾಹಿ ಜ್ಯುವೆಲ್ಲರಿ ಶಾಪ್ ಮಾಲಕಿ ವನಿತಾ ಎಸ್.ಐತಾಳ್ ಎಂಬವರಿಗೆ 9.82 ಕೋಟಿ ರೂ ಮೌಲ್ಯದ 14.660 ಕೆ.ಜಿ ಚಿನ್ನಾಭರಣ ವಂಚಿಸಿರುವ ಪ್ರಕರಣದಲ್ಲಿ ಚಂದ್ರಾ ಲೇಔಟ್ ಪೊಲೀಸರು, ಐಶ್ವರ್ಯಗೌಡ ಪತಿ ಕೆ.ಎನ್.ಹರೀಶ್ ನನ್ನು ಬಂಧಿಸಿದ್ದರು.
ಇದನ್ನು ಪ್ರಶ್ನಿಸಿ ಐಶ್ವರ್ಯ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಂಧನಕ್ಕೆ ಸಕಾರಣವನ್ನು ಲಿಖಿತವಾಗಿ ನೀಡದಿದ್ದಕ್ಕೆ ಆಕ್ಷೇಪಿಸಿ ಮಧ್ಯಂತರ ಜಾಮೀನು ನೀಡಿ ಕೂಡಲೇ ಆರೋಪಿತರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.