ಸಂಸತ್ ಕಪಾಲದ ವೇಳೆ ಗದ್ದಲ ಸೃಷ್ಠಿಸಿದ ಮೈಸೂರಿನ ಆರೋಪಿ ಮನೋರಂಜನ್ ಡಿ ಸಂಸತ್‌ಗೆ ಹೇಗೆ ‘ಕಲರ್ ಸ್ಮೋಕ್’ಗಳನ್ನು ತೆಗೆದುಕೊಂಡು ಹೋಗಬೇಕು ಎಂಬುದನ್ನು ತಿಳಿಸಿದ್ದ. ಆತ ತಿಂಗಳುಗಳ ಮುಂಚೆಯೇ ಸಂಸತ್‌ನ ಭದ್ರತಾ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡು ಬಂದಿದ್ದ. ಸದನದಲ್ಲಿ ಗದ್ದಲ ಸೃಷ್ಠಿಸಲು ತಮ್ಮ ಸ್ನೇಹಿತ ಸಾಗರ್ ಶರ್ಮಾ ಎಂಬಾತನನ್ನು ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಹಳೆ ಸಂಸತ್ ಭವನದಲ್ಲಿ ನಡೆದಿದ್ದ ಬಜೆಟ್ ಅಧಿವೇಶನದ ವೇಳೆ ಮನೋರಂಜನ್ ಕಲಾಪಕ್ಕೆ ಹಾಜರಾಗಿದ್ದ. ಸಂಸತ್‌ನಲ್ಲಿ ಭದ್ರತಾ ತಪಾಸಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳಲು ಆತ ಹೋಗಿದ್ದ. ತಪಾಸಣೆಯಲ್ಲಿ ಭೇಟಿ ನೀಡುವವರ ಬೂಟುಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಆತ ಕಂಡುಕೊಂಡಿದ್ದ.
ಬುಧವಾರ ಮನೋರಂಜನ್ ಮತ್ತು ಸಾಗರ್ ಶರ್ಮಾ ತಮ್ಮ ಶೂಗಳೊಳಗೆ ಬಣ್ಣದ ಹೊಗೆ ಡಬ್ಬಿಗಳನ್ನು ಬಚ್ಚಿಟ್ಟುಕೊಂಡು ಹೋಗಿದ್ದಾರೆ. ನಂತರ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಡೆದಿದ್ದ ಪಾಸ್‌ಗಳೊಂದಿಗೆ ಸಂದರ್ಶಕರ ಗ್ಯಾಲರಿಗೆ ತೆರಳಿದ್ದಾರೆ. ತಾವು ಸಿಕ್ಕಿಕೊಳ್ಳದಂತೆ ಭದ್ರತಾ ತಪಾಸಣೆಗಳನ್ನು ಪೂರೈಸಿದ್ದಾರೆ. ಕಲಾಪದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದು, ಬಣ್ಣದ ಹೊಗೆ (‘ಕಲರ್ ಸ್ಮೋಕ್‘)ಯನ್ನು ಹರಡಿದ್ದಾರೆ.
ಪ್ರಕರಣದಲ್ಲಿ ಈ ಇಬ್ಬರ ಜೊತೆಗೆ ಸಂಸತ್ತಿನ ಹೊರಗೆ ಬಣ್ಣದ ಹೊಗೆ ಬಳಸಿ ಪ್ರತಿಭಟನೆ ನಡೆಸಿದ ನೀಲಂ ಆಜಾದ್, ಅಮೋಲ್ ಶಿಂಧೆ ಹಾಗೂ ಇತರ ಆರೋಪಿ ವಿಕ್ಕಿ ಶರ್ಮಾ ಮತ್ತು ಆತನ ಪತ್ನಿ ರಾಖಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲಲಿತ್ ಝಾ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಮಣಿಪುರದ ಹಿಂಸಾಚಾರ, ದೇಶದಲ್ಲಿನ ನಿರುದ್ಯೋಗ ಮತ್ತು ರೈತರ ಸಮಸ್ಯೆಗಳನ್ನು ಎತ್ತಿ ತೋರಿಸುವುದೇ ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು ಎಂದು ಬಂಧಿತರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಭಯೋತ್ಪಾದನೆ – ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ?: ಮೈಸೂರು | ಪ್ರತಾಪ್ ಸಿಂಹ ಕಚೇರಿಗೆ ಬಿಗಿ ಭದ್ರತೆ; ಸಂಸದನ ಅಮಾನತಿಗೆ ಆಗ್ರಹ
ಸಂದರ್ಶಕರ ಪಾಸ್‌ಗಾಗಿ ಮನೋರಂಜನ್ ಅವರ ತಂದೆ ನನ್ನನ್ನು ಸಂಪರ್ಕಿಸಿದ್ದರು ಎಂದು ಸ್ಪೀಕರ್‌ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ತಮ್ಮ ಕ್ಷೇತ್ರದ ನಿವಾಸಿಗಳಿಗೆ ಸಂದರ್ಶಕರ ಪಾಸ್ ನೀಡಲಾಗುತ್ತದೆ ಎಂಬುದನ್ನು ಅವರು ತಿಳಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ನಡೆದ ಆಘಾತಕಾರಿ ದೃಶ್ಯಗಳು ಸಂಸತ್ತಿನ ಭದ್ರತೆಯಲ್ಲಿನ ಲೋಪಗಳು ಮತ್ತು ಲೋಪಗಳಿಂದಾಗುವ ಗಂಭೀರ ಪರಿಣಾಮಗಳನ್ನು ಬೆಳಕಿಗೆ ತಂದಿವೆ. ಪ್ರಾಸಂಗಿಕವಾಗಿ, ಈ ಹಿಂದೆ, 2001ರಲ್ಲಿ ಒಂಬತ್ತು ಜೀವಗಳನ್ನು ಬಲಿ ಪಡೆದ ಸಂಸತ್ ದಾಳಿಯ 22ನೇ ವಾರ್ಷಿಕೋತ್ಸವದ ದಿನವೇ ಈ ದಾಳಿಯೂ ನಡೆದಿದೆ.