- ಮಂಗಳೂರು ನೈತಿಕ ಪೊಲೀಸ್‌ಗಿರಿ ಖಂಡಿಸಿದ ಗೃಹ ಸಚಿವ ಜಿ ಪರಮೇಶ್ವರ್
- ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಸೂಚನೆ
ರಾಜ್ಯದಲ್ಲಿನ ‘ನೈತಿಕ ಪೊಲೀಸ್‌ಗಿರಿʼ ತಡೆಯಲು ʼಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ ಮಾಡಲಾಗುವುದೆಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.
ಮಂಗಳೂರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಪಶ್ಚಿಮ ವಿಭಾಗ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಹೊಸ ಘಟಕ ಆರಂಭಿಸುವುದಾಗಿ ತಿಳಿಸಿದರು.
ಹೊಸ ವಿಭಾಗದಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಕರಾವಳಿ ಭಾಗದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಸಹಬಾಳ್ವೆ ನಡೆಸುವ ಒಳ್ಳೆಯ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದ ಘಟನೆಗಳು ನಡೆಯದಂತೆ ಇವರು ನೋಡಿಕೊಳ್ಳಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಈ ಭಾಗದ ಜನ ಒಳ್ಳೆಯವರು, ಕೆಲವರಿಂದಾಗಿ ಈ ಭಾಗದಲ್ಲಿ ಭಯದ ವಾತಾವರಣವಿದೆ ಎಂದು ಜನ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಅನೈತಿಕ ಪೊಲೀಸ್ ಗಿರಿ : ಪಶ್ವಿಮ ವಲಯ ಪೊಲೀಸರೊಂದಿಗೆ ಗೃಹ ಸಚಿವರ ಸಭೆ
ನೈತಿಕ ಪೊಲೀಸ್‌ಗಿರಿಯ ಸಮಸ್ಯೆಗಳು ಸವಾಲುಗಳ ಬಗ್ಗೆ ವಿಚಾರಿಸಿದ್ದೇನೆ. ಈ ರೀತಿಯ ಘಟನೆ ವಿಚಾರಗಳು ನಮಗೆ ಹೊಸದೇನಲ್ಲ. ಮೂರನೇ ಭಾರಿ ನಾನು ಗೃಹ ಸಚಿವನಾಗಿದ್ದೇನೆ. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿಯಿಂದಾಗಿ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ. ಇದನ್ನು ತಡೆಯದಿದ್ರೆ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ಹೀಗಾಗಿ ಇದರ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದರ ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ ಗೃಹ ಸಚಿವರು, ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು ಎಂದು ಹೇಳಿದರು.
ಇದೇ ವೇಳೆ ಕರಾವಳಿಯ ಕೋಮುದ್ವೇಷಕ್ಕೆ ಬಲಿಯಾದ ದೀಪಕ್ ರಾವ್, ಫಾಜಿಲ್, ಜಲೀಲ್, ಮಸೂದ್ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ನೀಡಲಿದೆ. ಈ ಸಂಬಂಧ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.