- ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ ಸರಿಪಡಿಸಿ; ಸಿಎಂಗೆ ನಿರಾಶ್ರಿತ ಕುಟುಂಬಗಳ ಮನವಿ
- ಮನೆಗೊಂದು ಉದ್ಯೋಗ, ಸೈಟ್ ಗಾಗಿ ನಿರಾಶ್ರಿತರ ಮನವಿಗೆ ಸಿದ್ದರಾಮಯ್ಯ ಸ್ಪಂದನೆ
ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆಯು ನಿರ್ಮಿಸುತ್ತಿರುವ ವಾಯುನೆಲೆಯನ್ನು ವಿಸ್ತರಿಸಿ, ಸಿವಿಲ್ ಎನ್‌ಕ್ಲೇವ್ ನಿರ್ಮಿಸುವ ಯೋಜನೆಗೆ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ನಿಗದಿಯಲ್ಲಿ ಆಗಿರುವ ತಾರತಮ್ಯವನ್ನು 2013ರ ಭೂಸ್ವಾಧೀನ ಕಾಯ್ದೆಯನ್ವಯ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಮತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ತಾರತಮ್ಯ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್ ನೇತೃತ್ವದ ನಿಯೋಗವು ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ ಮತ್ತು ಮೋಸ ಸರಿಪಡಿಸಿ ಎಂದು ಸಭೆಯಲ್ಲಿ ಮೂರು ಗ್ರಾಮಗಳ ನಿರಾಶ್ರಿತ ಕುಟುಂಬಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ವೈಜ್ಞಾನಿಕವಾಗಿ, ನಿಯಮಬದ್ದವಾಗಿ ಪರಿಹಾರ ಕೊಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಕಾರ್ಯದರ್ಶಿಗಳು ಮತ್ತು ಸಂಬಂಧಿಸಿದ ಇತರ ಹಿರಿಯ ಅಧಿಕಾರಿಗಳೊಂದಿಗೆ, ಭೂಸ್ವಾಧೀನ ಪರಿಹಾರ ನಿಗದಿ, ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವ ಕುರಿತು ಹಾಗೂ ಸೂಕ್ತ ನಿವೇಶನ ನೀಡುವ ಕುರಿತಂತೆ ಸಭೆ ನಡೆಸಿ ಚರ್ಚಿಸುವಂತೆ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲರಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಸವ ಅಥವಾ ಗರ್ಭಪಾತ; ಮಹಿಳೆಯ ಆಯ್ಕೆಯೇ ಅಂತಿಮ
ಸೀಬರ್ಡ್ ಮೊದಲ ಹಂತದ ಯೋಜನೆಯಡಿ ಭೂಮಿ ಕಳೆದುಕೊಂಡವರ ಕುಟುಂಬದವರಿಗೂ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಿಯಾವುಲ್ಲಾ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.