ಪ್ರಶ್ನೆಗಾಗಿ ನಗದು ಆರೋಪ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾರನ್ನು ಲೋಕಸಭೆಯಿಂದ ಉಚ್ಚಾಟನೆಗೊಳಿಸಿದ ಬಳಿಕ ಕೇಂದ್ರ ಸರ್ಕಾರದ ಕಟು ಟೀಕಾಕಾರರಲ್ಲೊಬ್ಬರಾಗಿ ಗುರುತಿಸಿಕೊಂಡಿರುವ ಬಹುಭಾಷಾ ನಟ ಕಿಶೋರ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನಾಚಿಕೆಯೇ ಇಲ್ಲದ ಸರ್ಕಾರವು ‘ಮೋದಾನಿ’ಯ ಜೋಡಿಯ ಬಣ್ಣ ಬಯಲು ಮಾಡಿದ್ದಕ್ಕೆ, ಆಧಾರವೇ ಇಲ್ಲದ ಆರೋಪದ ನೆಪದಲ್ಲಿ ಬಂಗಾಳದ ದಿಟ್ಟ ಮಹಿಳಾ ಸಂಸದೆ ಮಹುವಾ ಮೊಯಿತ್ರಾರನ್ನು ನಂಬಲಸಾಧ್ಯ ವೇಗದಲ್ಲಿ ಉಚ್ಚಾಟನೆ ಮಾಡಿದೆ’ ಎಂದು ಫೇಸ್‌ಬುಕ್ ಪೋಸ್ಟ್‌ನ ಮೂಲಕ ಹರಿಹಾಯ್ದಿದ್ದಾರೆ.
ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ನಟ ಕಿಶೋರ್ ಕುಮಾರ್, ಉದ್ಯಮಿ ಅದಾನಿ ಪ್ರಕರಣ, ಹಿಂಡನ್‌ಬರ್ಗ್ ವರದಿ, ಲಖೀಂಪುರ್ ಖೇರಿ ಘಟನೆ, ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಪ್ರಕರಣ ಸೇರಿದಂತೆ ಮಹುವಾ ಮೊಯಿತ್ರಾ ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನದ ಬಗ್ಗೆ ಪ್ರಶ್ನಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪೋಸ್ಟ್‌ನಲ್ಲಿ, “ನಾಚಿಕೆಗೆಟ್ಟ ವಿಶ್ವಗುರುವಿನ ನವ ಭಾರತಕ್ಕೆ ಸ್ವಾಗತ. ತಾನು ಮಾಡುತ್ತಿರುವ ಕುಕೃತ್ಯಗಳು ಜಗತ್ತಿಗೆ ಕಾಣುತ್ತಿರುವುದನ್ನು ತಿಳಿದೂ ಮುಂದುವರೆಸುವುದು ಭಂಡತನ, ನಾಚಿಕೆಗೇಡಿತನದ ಪರಾಕಾಷ್ಠೆ” ಎಂದು ಪ್ರಧಾನಿಯನ್ನು ಜರೆದಿದ್ದಾರೆ.
“ವಿಶ್ವದ ಅತಿ ದೊಡ್ಡ ಸ್ಕ್ಯಾಮ್‌ಗಾರ ಎಂದು ಆರೋಪ ಹೊತ್ತ, ನೀತಿ ಆಯೋಗದ ವರದಿಯ ಪ್ರಕಾರ ಯೋಗ್ಯತೆಯೇ ಇಲ್ಲದೇ ಇದ್ದರೂ ಬರೀ ವಿಶ್ವಗುರುವಿಗೆ ತನ್ನ ಏರೋಪ್ಲೇನು ಹತ್ತಿಸಿ, ದೇಶದ ಬಹುಪಾಲು ಆಸ್ತಿಯನ್ನು ತನ್ನದಾಗಿಸಿಕೊಂಡ ಅದಾನಿ ವಿರುದ್ಧ ಹಿಂಡನ್‌ಬರ್ಗ್ ಆರೋಪ ಮತ್ತು ಅದರ ಹಲವು ಸಾಕ್ಷಿಗಳು ಹೊರ ಬಂದು ವರ್ಷವೇ ಕಳೆದರೂ ಕಮಕ್ ಕಿಮಕ್ಕನ್ನದ, ರೈತರನ್ನು ಆತಂಕವಾದಿಗಳೆಂದು ಕರೆದು ಅವರ ಮೇಲೆ ಜೀಪು ಹತ್ತಿಸಲು ತನ್ನ ಮಗನಿಗೆ ಕುಮ್ಮಕ್ಕು ಕೊಟ್ಟ ಗೃಹರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿ ಬಗ್ಗೆ ಎರಡು ವರ್ಷವಾದರೂ ಮಾತಾಡದೇ ಕೈಕಟ್ಟಿ ಕೂತ, ವಿಶ್ವದ ಪ್ರಸಿದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಬ್ರಿಜ್ ಭೂಷಣನ ಕೂದಲೂ ಅಲ್ಲಾಡಿಸಲಾಗದ, ನಾಚಿಕೆಯೇ ಇಲ್ಲದ ಸರ್ಕಾರ ಇದು” ಎಂದು ಕಿಶೋರ್ ಕುಮಾರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಮೋದಾನಿಯ ಜೋಡಿಯ ಬಣ್ಣ ಬಯಲು ಮಾಡಿದ್ದಕ್ಕೆ, ಆಧಾರವೇ ಇಲ್ಲದ ಆರೋಪದ ನೆಪದಲ್ಲಿ ಬಂಗಾಳದ ದಿಟ್ಟ ಮಹಿಳಾ ಸಂಸದೆ ಮಹುವಾ ಮೊಯಿತ್ರಾರನ್ನು ನಂಬಲಸಾಧ್ಯ ವೇಗದಲ್ಲಿ ಉಚ್ಚಾಟನೆ ಮಾಡಿಬಿಡುತ್ತದೆ. ಲಾಗಿನ್ ಐಡಿ ಪಾಸ್ವರ್ಡ್ ಸ್ನೇಹಿತನಿಗೆ ಕೊಟ್ಟದ್ದಕ್ಕೆ ಸಂಸತ್ತಿನಿಂದ ಉಚ್ಚಾಟನೆಯಾಗಬಹುದಾದರೆ, ದೇಶದ ಆಸ್ತಿಗಳನ್ನೆಲ್ಲ ಗೆಳೆಯನಿಗೆ ಕೊಟ್ಟ ವಿಶ್ವಗುರುವನ್ನೇನು ಮಾಡಬೇಕು?” ಎಂದು ಪ್ರಧಾನಿಯ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿದ್ದಾರೆ.
“ನೋಡಿ ಮೊಯಿತ್ರಾಜೀ ಕಲಿಯಿರಿ ನಮ್ಮ ವಿಶ್ವಗುರುವಿನಿಂದ. ಉಚ್ಚಾಟನೆಯಾಗದೆ ಗೆಳೆಯರಿಗೆ ಲಾಭ ಮಾಡಿಕೊಡುವುದು ಮತ್ತು ಗೆಳೆಯರಿಂದ ಲಾಭ ಪಡೆಯುವುದು ಹೇಗೆ ಎಂದು” ವ್ಯಂಗ್ಯದ ಧಾಟಿಯಲ್ಲಿ ಪ್ರಧಾನಿಯನ್ನು ಜರೆಯುವ ಮೂಲಕ ಟಿಎಂಸಿ ಸಂಸದೆ ಮೊಯಿತ್ರಾರಿಗೆ ಸಲಹೆ ನೀಡಿದ್ದಾರೆ.