ಪ್ರಧಾನಿ ಮೋದಿ ಹಾಗೂ ಕೇಂದ್ರದ ಬಿಜೆಪಿ ಕಾರ್ಯವೈಖರಿಯನ್ನು ಆಗಾಗ ತರಾಟೆಗೆ ತೆಗೆದುಕೊಳ್ಳುವ ನಟ ಪ್ರಕಾಶ್ ರೈ, ಇಂದು ದೇಶದ ವಿವಿಧೆಡೆ ವಂದೇ ಭಾರತ್ ರೈಲುಗಳ ಉದ್ಘಾಟನೆಯನ್ನು ಛೇಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಅವರು, “ಒಬ್ಬ ಸ್ಟೇಷನ್ ಮಾಸ್ಟರ್ ಇದನ್ನು ಮಾಡಬಹುದು. ನಾವು ನಿಜವಾಗಿಯೂ ನಿಮ್ಮನ್ನು ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ನೋಡಲು ಬಯಸುತ್ತೇನೆ” ಎಂದದ್ದಾರೆ,
ಪ್ರಕಾಶ್ ರೈ ಅವರ ಟ್ವೀಟ್ಗೆ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿ ಬೆಂಬಲ ವ್ಯಕ್ತಪಡಿಸಿದರೆ, ನಾನೂರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಪ್ರಕಾಶ್ ರೈ ಮೋದಿ ಅಮೆರಿಕ ಭೇಟಿ ವಿರೋಧಿಸಿ ಸರಣಿ ಟ್ವೀಟ್ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಅರ್ಚಕ ವೃತ್ತಿ ಜಾತ್ಯತೀತ – ಯಾವುದೇ ಜಾತಿಯವರು ದೇವಸ್ಥಾನದ ಅರ್ಚಕರಾಗಬಹುದು: ಮದ್ರಾಸ್ ಹೈಕೋರ್ಟ್
ಬೆಂಗಳೂರು-ಧಾರವಾಡದ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲುಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಇದೇ ವೇಳೆ ಭೋಪಾಲ್-ಇಂದೋರ್, ಭೋಪಾಲ್-ಜಬಲ್ಪುರ, ರಾಂಚಿ-ಪಾಟ್ನಾ ಮತ್ತು ಮಡಗಾಂವ್- ಮುಂಬಯಿ ಮಾರ್ಗದ ವಂದೇ ಭಾರತ್ ರೈಲುಗಳಿಗೆ ಪ್ರಧಾನಿಯವರಿಂದ ಚಾಲನೆ ದೊರೆಯಿತು.
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 490 ಕಿಲೋ ಮೀಟರ್ಗಳ ಹುಬ್ಬಳ್ಳಿ-ಧಾರವಾಡವನ್ನು 6 ಗಂಟೆ 13 ನಿಮಿಷದಲ್ಲಿ ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು 11.58ಕ್ಕೆ ಧಾರವಾಡ ರೈಲು ನಿಲ್ದಾಣ ತಲುಪುತ್ತೆ. ಇದು ಗಂಟೆಗೆ ಸರಾಸರಿ 78.82 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುತ್ತೆ.
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಟಿಕೆಟ್ ದರ ಎಸಿ ಚೇರ್ಕಾರ್ ಕ್ಲಾಸ್ನಲ್ಲಿ ಒಂದು ಬಾರಿಯ ಪ್ರಯಾಣಕ್ಕೆ ಸುಮಾರು 1,205 ರೂಪಾಯಿ ಇದೆ. ಎಕ್ಸಿಕ್ಯೂಟಿವ್ ಚೇರ್ಕಾರ್ಗೆ ಊಟದ ವೆಚ್ಚ ಸೇರಿ 2,395 ರೂಪಾಯಿ ಇದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್ ರೈಲ್ವೆ ನಿಲ್ದಾಣ) ನಿಂದ ಯಶವಂತಪುರಕ್ಕೆ ಎಸಿ ಚೇರ್ಕಾರ್ 410 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್ಕಾರ್ಗೆ 545 ರೂಪಾಯಿ ನಿಗದಿ ಪಡಿಸಲಾಗಿದೆ.