2024-25ರ ಆರ್ಥಿಕ ವರ್ಷದಲ್ಲಿ ಸ್ಟ್ಯಾಂಪ್ ಮತ್ತು ನೋಂದಣಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15,145 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಎಂಎಲ್ಸಿ ಶಶಿಲ್ ನೋಮೋಶಿ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, “ಇ-ಖಾತಾ ರೀತಿಯ ವ್ಯವಸ್ಥೆ ಪರಿಚಯಿಸುವ ಮೂಲಕ ಅಂಚೆಚೀಟಿಗಳು ಮತ್ತು ನೋಂದಣಿಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಶ್ರಮಿಸಿದೆ. ಹೊತೆಗೆ, ಕಳೆದ ವರ್ಷಕ್ಕಿಂತ ಈ ವರ್ಷ 20% ಆದಾಯ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಅದರಂತೆ, 15,145 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ” ಎಂದು ತಿಳಿಸಿದ್ದಾರೆ.
“ಮಾಜಿ ಸೈನಿಕರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರ ಸೇವೆ ಮತ್ತು ತ್ಯಾಗವನ್ನು ಪರಗಣಿಸಿ, ಅವರಿಗೆ ವಸತಿ ನಿವೇಶನಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಪಡಿಸಿಸಿದ ನಿವೇಶಗಳನ್ನು ಆಯಾ ಜಿಲ್ಲೆಯ ಮಾಜಿ ಸೈನಿಕರಿಗೆ ಉಚಿತವಾಗಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿವೇಶನಕ್ಕಾಗಿ 16,065 ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ 6,783 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 9,282 ಬಾಕಿ ಉಳಿದಿವೆ” ಎಂದು ತಿಳಿಸಿದ್ದಾರೆ.