ರಷ್ಯಾ ಸರ್ಕಾರಿ ಸೇನೆ ಹಾಗೂ ಯೆವ್ಗೆನಿ ಪ್ರಿಗೋಷಿನ್ ನೇತೃತ್ವದ ಖಾಸಗಿ ವ್ಯಾಗ್ನರ್ ಪಡೆ ನಡುವೆ ನಡೆಯುತ್ತಿದ್ದ ಆಂತರಿಕ ಬಂಡಾಯ ಶಮನವಾಗಿದೆ. ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ಥಿಕೆಯಿಂದ ಪ್ರಿಗೋಷಿನ್ ದಂಗೆ ಸ್ಥಗಿತಗೊಂಡಿದೆ.
ಮಾಸ್ಕೋ ಸನಿಹಕ್ಕೆ ಬಂದಿದ್ದ ವ್ಯಾಗ್ನರ್ ಸೇನಾ ಪಡೆಗಳಿಗೆ ವಾಪಸ್ ಉಕ್ರೇನ್‌ಗೆ ಮರಳುವಂತೆ ಸೂಚಿಲಾಗಿದೆ. ದೇಶದ್ರೋಹದ ಶಿಕ್ಷೆಯಿಂದ ಪಾರು ಮಾಡುವ ಭರವಸೆ ಹಾಗೂ ಭಾರಿ ರಕ್ತಪಾತ ತಪ್ಪಿಸುವ ಉದ್ದೇಶದಿಂದ ಪ್ರಿಗೋಷಿನ್ ಈ ನಿರ್ಧಾರ ಕೈಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸೇನಾ ಬಂಡಾಯ ಶಮನದಿಂದ ರಷ್ಯಾ ಈಗ ನಿಟ್ಟುಸಿರು ಬಿಟ್ಟಿದೆ.
ಪುಟಿನ್ ಆಪ್ತ ಯೆವ್ಗೆನಿ ಪ್ರಿಗೋಷಿನ್ ನೇತೃತ್ವದ ವ್ಯಾಗ್ನರ್ ಖಾಸಗಿ ಸೈನ್ಯ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ನಂತರ ಮಾಸ್ಕೋ ನಗರದ ಹೆಚ್ಚಿನ ಭಾಗವನ್ನು ಆಕ್ರಮಿಸಲು ಮುಂದುವರೆದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿ ಪಿ ಸಿಂಗ್: ‘ಕಮಂಡಲ’ ರಾಜಕಾರಣ ಮರುಕಳಿಸುತ್ತಿರುವ ಕಾಲದಲ್ಲಿ ‘ಮಂಡಲ್ ಹೀರೋ’ ನೆನಪು
ಪ್ರಿಗೋಷಿನ್ ಮಾತನಾಡಿ, “ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ವಾಪಸ್ ಆಗುವಂತೆ ನಮ್ಮ ಪಡೆಗೆ ಆದೇಶ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಪ್ರಿಗೋಷಿನ್ ನೇತೃತ್ವದ ಖಾಸಗಿ ಸೇನೆ ಮಾಸ್ಕೊದಿಂದ ಸುಮಾರು 200 ಕಿ. ಮೀ. ದೂರದಲ್ಲಿತ್ತು. ಆಗ ಪ್ರಿಗೋಷಿನ್ ತನ್ನ ಪಡೆಗಳಿಗೆ ದಾಳಿ ನಿಲ್ಲಿಸಿ, ಉಕ್ರೇನ್‌ನ ಸೇನಾ ಶಿಬಿರಕ್ಕೆ ವಾಪಸ್ ಆಗುವ ಸೂಚನೆ ಕೊಟ್ಟಿದ್ದಾರೆ.
ವ್ಯಾಗ್ನರ್ ಪಡೆ ಮಾಸ್ಕೊ ನಗರ ಪ್ರವೇಶ ಮಾಡುವ ಆತಂಕ ಎದುರಾಗಿತ್ತು. ಇದರಿಂದಾಗಿ ನಗರಕ್ಕೆ ಆಗಮಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ರಷ್ಯಾ ಸೇನೆಯ ಯೋಧರನ್ನು ನಿಯೋಜನೆ ಮಾಡಲಾಗಿತ್ತು. ನಾಕಬಂದಿ ಸ್ಥಾಪನೆ ಮಾಡಿ ಶಸ್ತ್ರಸಜ್ಜಿತ ಯೋಧರನ್ನು ಕಾವಲಿಗೆ ಹಾಕಲಾಗಿತ್ತು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ಕಾಲದ ಆಪ್ತ ಯೆವ್ಗೆನಿ ಪ್ರಿಗೋಷಿನ್ 2014ರಲ್ಲಿ ಪುಟಿನ್ ಬೆಂಬಲದಿಂದಲೇ ‘ವ್ಯಾಗ್ನರ್’ ಎಂಬ ಖಾಸಗಿ ಸೇನೆ ಕಟ್ಟಿದ್ದರು. ಈಗ ಅಧ್ಯಕ್ಷರ ವಿರುದ್ಧವೇ ಹೋರಾಟ ಆರಂಭಿಸಿದ್ದರಿಂದ ರಷ್ಯಾ ಸೇರಿದಂತೆ ಅನೇಕ ದೇಶದಲ್ಲಿ ಆತಂಕ ಮೂಡಿತ್ತು.
ವ್ಯಾಗ್ನರ್ ಗುಂಪು ಬೆನ್ನಿಗೆ ಚೂರಿ ಹಾಕಿದೆ ಎಂದು ಪುಟಿನ್ ಶನಿವಾರ ಹೇಳಿದ್ದರು. ಯೆವ್ಗೆನಿ ಪ್ರಿಗೋಷಿನ್ ರಷ್ಯಾ ಸೇನೆಯ ಉನ್ನತ ಅಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ಜೊತೆಗೆ ಹೊಂದಿದ್ದ ಅಸಮಾಧಾನವೇ ಸುಮಾರು 50 ಸಾವಿರ ಸೈನಿಕರ ಜೊತೆ ದಾಳಿ ಆರಂಭಿಸಲು ಕಾರಣ ಎಂದು ಹೇಳಲಾಗಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ವ್ಯಾಗ್ನರ್ ಖಾಸಗಿ ಸೇನೆ ಮಹತ್ವದ ಪಾತ್ರ ವಹಿಸಿದೆ.