ಕರ್ನಾಟಕಕ್ಕೆ ಮೋದಿ ಮೋಸ; ತೆರಿಗೆ ಹಂಚಿಕೆಯಲ್ಲಿ ಮತ್ತೆ ತಾರತಮ್ಯ

Date:

Advertisements
ಉತ್ತರ ಪ್ರದೇಶಕ್ಕೆ ಬರೋಬ್ಬರಿ 36 ಸಾವಿರ ಕೋಟಿ ರೂ. ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 6 ಸಾವಿರ ಕೋಟಿ ರೂ. ನೀಡಿದೆ. ಉತ್ತರ ಪ್ರದೇಶಕ್ಕೂ ಕರ್ನಾಟಕಕ್ಕೂ ಹಂಚಿಕೆಯಾದ ಪಾಲಿನಲ್ಲಿ 30,000 ಕೋಟಿ ರೂ. ವ್ಯತ್ಯಾಸವಿದೆ. ಅಂದರೆ, ಉತ್ತರ ಪ್ರದೇಶಕ್ಕೆ ಒಂದು ವರ್ಷದಲ್ಲಿ ದೊರೆಯುವ ಪಾಲನ್ನು ಕರ್ನಾಟಕ ಪಡೆಯಲು ಕನಿಷ್ಠ 6 ವರ್ಷಗಳು ಬೇಕು. ಇದು, ಅಕ್ಷರಶಃ ದಕ್ಷಿಣದ ಮೇಲೆ ಉತ್ತರ ಸವಾರಿ ಮಾಡುವುದರ ಲಕ್ಷಣ.

ಪ್ರಧಾನಿ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ ಆದಾಯ ಹಂಚಿಕೆಯಲ್ಲಿ ಕೆಲ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿಯೇತರ ಸರ್ಕಾರಗಳ ಆಡಳಿತವಿರುವ ರಾಜ್ಯಗಳಿಗೆ ಕಡಿಮೆ ಹಂಚಿಕೆ ಮಾಡಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೆರಿಗೆಯ ಹೆಚ್ಚಿನ ಪಾಲನ್ನು ಹಂಚುತ್ತಿದೆ ಎಂಬ ಆರೋಪ ಪ್ರತಿವರ್ಷವೂ ಕೇಳಿಬರುತ್ತಿದೆ. ರಾಜ್ಯಗಳಿಗೆ ನ್ಯಾಯಯುತವಾಗಿ ತೆರಿಗೆ ಹಂಚಿಕೆ ಮಾಡಬೇಕಾದ ಮೋದಿ ಸರ್ಕಾರ, ಈ ಬಾರಿಗೂ ತನ್ನ ತಾರತಮ್ಯ ಧೋರಣೆಯನ್ನು ಮುಂದುವರೆಸಿದೆ.

ಅ.10ರಂದು ಕೇಂದ್ರ ಸರ್ಕಾರವು ತೆರಿಗೆ ಆದಾಯದಲ್ಲಿ ಸಂಗ್ರಹವಾದ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ, ಬಿಜೆಪಿ ಅಧಿಕಾರದಲ್ಲಿರುವ, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶ ಗರಿಷ್ಠ ಪಾಲು ಪಡೆದುಕೊಂಡಿದೆ. ಯಥಾಪ್ರಕಾರ, ಕರ್ನಾಟಕಕ್ಕೆ ಈ ಬಾರಿಯೂ ಅನ್ಯಾಯವಾಗಿದೆ.

ಉತ್ತರಪ್ರದೇಶಕ್ಕೆ ಬರೋಬ್ಬರಿ 31,962 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ. ನೀಡಲಾಗಿದೆ. ಉತ್ತರ ಪ್ರದೇಶ ಮಾತ್ರವಲ್ಲದೆ, ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಒಡಿಶಾ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ಹೆಚ್ಚಿನ ಲಾಭ ಪಡೆದುಕೊಂಡಿವೆ. ಈ ರಾಜ್ಯಗಳು ಕ್ರಮವಾಗಿ, 13,987 ಕೋಟಿ ರೂ., 11,255 ಕೋಟಿ ರೂ., 10,737 ಕೋಟಿ ರೂ., 8,068 ಕೋಟಿ ರೂ., ಪಡೆದುಕೊಂಡಿವೆ. ಅಂತೆಯೇ ಬಿಜೆಪಿಯ ಮಿತ್ರಪಕ್ಷಗಳ ಆಡಳಿತ ಇರುವ ಬಿಹಾರ 17,921 ಕೋಟಿ ರೂ. ಪಡೆದುಕೊಂಡಿದ್ದರೆ, ಆಂಧ್ರಪ್ರದೇಶ 7,211 ಕೋಟಿ ರೂ. ಗಿಟ್ಟಿಸಿಕೊಂಡಿದೆ.

Advertisements

ಆದಾಗ್ಯೂ, ವಿಪಕ್ಷಗಳು ಅಧಿಕಾರದಲ್ಲಿರುವ ಕೇರಳ, ತೆಲಂಗಾಣ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ತೀರಾ ಕಡಿಮೆ ಹಂಚಿಕೆ ನೀಡಲಾಗಿದೆ. ಕೇಂದ್ರಕ್ಕೆ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದ್ದರೂ, ಕೇಂದ್ರ ತೆರಿಗೆ ಆದಾಯ ಹಂಚಿಕೆಯಲ್ಲಿ 10ನೇ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ. ನೀಡಲಾಗಿದೆ. ಇನ್ನು, ದಕ್ಷಿಣದ ರಾಜ್ಯಗಳೇ ಆದ, ಕೇರಳ ಮತ್ತು ತೆಲಂಗಾಣ ಕ್ರಮವಾಗಿ 3,430 ಕೋಟಿ ರೂ. ಮತ್ತು 3,745 ಕೋಟಿ ರೂ. ಪಡೆದುಕೊಂಡಿವೆ.

ಈ ತೆರಿಗೆ ತಾರತಮ್ಯ ಇಂದು-ನಿನ್ನೆಯದಲ್ಲ. ದಶಕಗಳಿಂದಲೂ ಈ ತಾರತಮ್ಯ ಮುಂದುವರೆದಿದೆ. ಜಿಎಸ್‌ಟಿ ಜಾರಿಯಾದ ಮೇಲೆ ತಾರತಮ್ಯವು ಗಣನೀಯವಾಗಿ ಹೆಚ್ಚಾಗಿದೆ. ಗಮನಾರ್ಹವಾಗಿ ದಕ್ಷಿಣ ರಾಜ್ಯಗಳಿಗೆ ಕೇಂದ್ರಕ್ಕೆ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ಈ ರಾಜ್ಯಗಳಿಗೆ ಹಂಚಿಕೆಯಲ್ಲಿ ಭಾರೀ ಕಡಿಮೆ ಮೊತ್ತ ದೊರೆಯುತ್ತಿದೆ.

ಗಮನಿಸಬೇಕಾದ ವಿಚಾರವೆಂದರೆ, ತೆರಿಗೆ ಸಂಗ್ರಹಿಸಲು ಹೆಚ್ಚು ಅವಕಾಶ ಕೇಂದ್ರಕ್ಕಿದ್ದರೆ, ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ರಾಜ್ಯಗಳ ಮೇಲಿದೆ. ಹೀಗಾಗಿ, ರಾಜ್ಯಗಳಲ್ಲಿ ಜನಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕೆಂದರೆ, ಕೇಂದ್ರದಿಂದ ಸರಿಯಾದ, ನ್ಯಾಯಯುತವಾದ ಅನುದಾಹ ಹಂಚಿಕೆಯಾಗಬೇಕು.

ಹೀಗಾಗಿಯೇ, ಆಯಾ ರಾಜ್ಯಗಳಿಂದ ಬರುವ ತೆರಿಗೆ ಆದಾಯ ಮತ್ತು ರಾಜ್ಯಗಳಿಗೆ ಅಗತ್ಯವಿರುವ ಹಣಕಾಸಿನ ಬಗ್ಗೆ ಅಧ್ಯಯನ ನಡೆಸಿ, ತೆರಿಗೆ ಹಂಚಿಕೆಗೆ ಶಿಫಾರಸು ಮಾಡಬೇಕೆಂದೇ ಹಣಕಾಸು ಆಯೋಗಗಳನ್ನೂ ಕಾಲಕಾಲಕ್ಕೆ ರಚಿಸಲಾಗುತ್ತದೆ. ಆದಾಗ್ಯೂ, ಕೇಂದ್ರದ ತಾರತಮ್ಯ ಧೋರಣೆ ನಿಂತಿಲ್ಲ.

ಈ ಹಿಂದೆ, ವೈ.ವಿ.ರೆಡ್ಡಿ ಅವರ ನೇತೃತ್ವದ 14ನೇ ಹಣಕಾಸು ಆಯೋಗವು, ‘ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳು ಒಂದು ಮತ್ತೊಂದರ ಸ್ವಾಯತ್ತತೆಯನ್ನು ಅತಿಕ್ರಮಿಸಬಾರದು’ ಎಂದು ಹೇಳಿತ್ತು. ಜೊತೆಗೆ, ಕೇಂದ್ರದಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆಯಲ್ಲಿ ರಾಜ್ಯಗಳಿಗೆ ಹೆಚ್ಚು ಪಾಲು ನೀಡಬೇಕೆಂದು ರಾಜ್ಯಗಳ ಪಾಲನ್ನು 34%ನಿಂದ 42%ಗೆ ಏರಿಸಿತು.

ಆದರೆ, ರಾಜ್ಯಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಬಯಸುವ ಪ್ರಧಾನಿ ಮೋದಿ, ಆಯೋಗದ ಶಿಫಾರಸನ್ನು ಒಪ್ಪಲು ಹಿಂದೇಟು ಹಾಕಿತು. ರಾಜ್ಯಗಳ ಪಾಲನ್ನು ಹೆಚ್ಚಿಸದೇ ಇರಲು ಬೇರೊಂದು ತಂತ್ರ ಹೆಣೆಯಿತು. ಸೆಸ್ ಹಾಗೂ ಸರ್‌ಚಾರ್ಜ್‌ ಅನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿತು. ಮತ್ತೆ, ರಾಜ್ಯಗಳ ತೆರಿಗೆ ಹಂಚಿಕೆ ಪಾಲನ್ನು 34%ಗೆ ಇಳಿಸಿತು. ಪರಿಣಾಮವಾಗಿ, ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಬರೋಬ್ಬರಿ 60,000 ಕೋಟಿ ರೂ. ನಷ್ಟವಾಗಿದೆ.

ಇನ್ನು, 15ನೇ ಹಣಕಾಸು ಆಯೋಗವನ್ನು ನೇಮಿಸಿದ ಮೋದಿ ಸರ್ಕಾರ, 14ನೇ ಆಯೋಗವು ಶಿಫಾರಸು ಮಾಡಿದ್ದ 42% ತೆರಿಗೆ ರಾಜ್ಯಗಳಿಗೆ ಹಂಚಿಕೆ ಮಾಡಬೇಕು ಎಂಬುದನ್ನು ಮರುಪರಿಶೀಲಿಸಲು ಸೂಚಿಸಿತು. ಕೇಂದ್ರದ ಆಣತಿಯನ್ನು ವರದಿ ಸಿದ್ದಪಡಿಸಿದ ಆಯೋಗವು, ಕರ್ನಾಟಕದ ಪಾಲನ್ನು 4.71%ರಿಂದ 3.64%ಗೆ ಇಳಿಸಿತು. ಕರ್ನಾಟಕಕ್ಕೆ ಆದ ನಷ್ಟವನ್ನು ಸರಿದೂಗಿಸಲು 5,495 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಸೂಚನೆ ನೀಡಿತು. ಆದರೆ, ಕೇಂದ್ರ ಈವರೆಗೆ ಆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಯೇ ಇಲ್ಲ.

ಜೊತೆಗೆ, ಜಿಎಸ್‌ಟಿ ವ್ಯವಸ್ಥೆಯಿಂದಾಗಿ ಕರ್ನಾಟಕಕ್ಕೆ ಸುಮಾರು 59,294 ಕೋಟಿ ರೂ. ನಷ್ಟವಾಗಿದೆ. ತೆರಿಗೆ ಪಾಲನ್ನು 4.71%ರಿಂದ 3.64%ಗೆ ಇಳಿಸಿದ್ದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು ₹80,000 ಕೋಟಿ ನಷ್ಟವಾಗಿದೆ. ಇನ್ನು, ಭದ್ರಾ ಮೇಲ್ದಂಡೆ ಯೋಜನೆಯೂ ಸೇರಿದಂತೆ ಕೇಂದ್ರ ಪ್ರಾಯೋಜಿತ ಹಲವಾರು ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಇದೆಲ್ಲವೂ ರಾಜ್ಯದಲ್ಲಿನ ಅಭಿವೃದ್ದಿ ಕೆಲಸಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

ಹೀಗಾಗಿಯೇ, ರಾಜ್ಯದ ಪಾಲನ್ನು ನ್ಯಾಯಯುತವಾಗಿ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸಚಿವರು ಮತ್ತು ಶಾಸಕರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು 3.64% ಇಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು 16ನೇ ಹಣಕಾಸು ಆಯೋಗಕ್ಕೂ ಮನವಿ ಮಾಡಿದ್ದರು. ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ಕೈಜೋಡಿಸುವಂತೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಈ ಹಿಂದೆಯೇ ಪತ್ರವನ್ನೂ ಬರೆದಿದ್ದರು.

ಈ ವರದಿ ಓದಿದ್ದೀರಾ?: ಕೇಂದ್ರದ ಹುನ್ನಾರಕ್ಕೆ ಬಲಿಯಾದ ಮಹದಾಯಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

”ನಾವು ಕೇಂದ್ರಕ್ಕೆ ಒಂದು ರೂಪಾಯಿ ನೀಡಿದರೆ, ನಮಗೆ ವಾಪಸ್‌ ಬರುತ್ತಿರುವುದು 15 ಪೈಸೆಯಷ್ಟೆ. ಬಡ ರಾಜ್ಯಗಳಿಗೆ ನೆರವು ನೀಡಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಅದಕ್ಕೆಂದು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲಾಗದು. ಉತ್ತಮವಾಗಿ ಕಾರ್ಯನಿರ್ವಹಿಸಿ, ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟಿರುವ ಕರ್ನಾಟಕದಂತಹ ರಾಜ್ಯಗಳಿಗೆ ನಷ್ಟವಾಗುವುದನ್ನು ತಡೆಯಬೇಕು. ನ್ಯಾಯಯುತ ಪಾಲು ನೀಡಲು ಶಿಫಾರಸು ಮಾಡಬೇಕು” ಎಂದು 16ನೇ ಹಣಕಾಸು ಆಯೋಗಕ್ಕೆ ಸಿದ್ದರಾಮ್ಯಯ ಮನವಿ ಮಾಡಿದ್ದರು.

ಆದಾಗ್ಯೂ, ಕೇಂದ್ರವು ತನ್ನ ತಾರತಮ್ಯ ಧೋರಣೆಯನ್ನು ಬಿಟ್ಟಿಲ್ಲ. ಮತ್ತೆ-ಮತ್ತೆ ‘ಒಂದು ಕಣ್ಣಿಗೆ ಬೆಣ್ಣೆ – ಮತ್ತೊಂದು ಕಣ್ಣಿಗೆ ಸುಣ್ಣ’ ಎಂಬ ಧೋರಣೆಯನ್ನೇ ಮುಂದುವರೆಸಿದೆ. ಉತ್ತರ ಪ್ರದೇಶಕ್ಕೆ ಬರೋಬ್ಬರಿ 36 ಸಾವಿರ ಕೋಟಿ ರೂ. ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 6 ಸಾವಿರ ಕೋಟಿ ರೂ. ನೀಡಿದೆ. ಉತ್ತರ ಪ್ರದೇಶಕ್ಕೂ ಕರ್ನಾಟಕಕ್ಕೂ ಹಂಚಿಕೆಯಾದ ಪಾಲಿನಲ್ಲಿ 30,000 ಕೋಟಿ ರೂ. ವ್ಯತ್ಯಾಸವಿದೆ. ಅಂದರೆ, ಉತ್ತರ ಪ್ರದೇಶಕ್ಕೆ ಒಂದು ವರ್ಷದಲ್ಲಿ ದೊರೆಯುವ ಪಾಲನ್ನು ಕರ್ನಾಟಕ ಪಡೆಯಲು ಕನಿಷ್ಠ 6 ವರ್ಷಗಳು ಬೇಕು. ಇದು, ಅಕ್ಷರಶಃ ದಕ್ಷಿಣದ ಮೇಲೆ ಉತ್ತರ ಸವಾರಿ ಮಾಡುವುದರ ಲಕ್ಷಣ. ಕೇಂದ್ರದ ಈ ಹುನ್ನಾರದ ವಿರುದ್ಧ ಹೋರಾಡಬೇಕಿದೆ. ಅದಕ್ಕಾಗಿ, ದಕ್ಷಿಣದ ಎಲ್ಲ ರಾಜ್ಯಗಳು ಒಗ್ಗೂಡಬೇಕಿದೆ. ದನಿ ಎತ್ತಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X