- ಅಜಿತ್ ಪವಾರ್ ಸೇರಿದಂತೆ ಬಂಡಾಯ ನಾಯಕರ ಭೇಟಿ ಖಚಿತಪಡಿಸಿದ ಜಯಂತ್ ಪಾಟೀಲ್
- ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಮುನ್ನಾ ದಿನ ಬಂಡಾಯ ನಾಯಕರ ಭೇಟಿ
ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರು ತಮ್ಮ ಕೆಲವು ನಿಷ್ಠಾವಂತ ಶಾಸಕರು ಹಾಗೂ ಎಲ್ಲ ಎನ್‌ಸಿಪಿ ಸಚಿವರ ಜತೆಗೂಡಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭಾನುವಾರ (ಜುಲೈ 16) ಭೇಟಿಯಾಗಿದ್ದಾರೆ.
ಪಕ್ಷದ ವಿರುದ್ಧವೇ ಬಂಡಾಯದ ಬಾವುಟ ಬೀಸಿ ಶಿವಸೇನಾ- ಬಿಜೆಪಿ ಸರ್ಕಾರದ ಜತೆ ಸೇರಿಕೊಂಡಿದ್ದ ನಾಯಕರು, ಈಗ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭದ ಹಿಂದಿನ ದಿನ ಶರದ್ ಪವಾರ್ ಅವರ ಜತೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
“ಅಜಿತ್ ಪವಾರ್ ಅವರ ಜೊತೆಗೂಡಿ ಇಂದು ನಮ್ಮ ದೇವರು ಹಾಗೂ ನಮ್ಮ ನಾಯಕ ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ಅವರನ್ನು ಭೇಟಿ ಮಾಡಿದೆವು” ಎಂದು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
“ನಾವು ಯಾವುದೇ ಸಮಯ ಕೇಳದೆ ಇಲ್ಲಿಗೆ ಬಂದಿದ್ದೇವೆ. ಸಭೆಯೊಂದರ ಸಲುವಾಗಿ ಶರದ್ ಪವಾರ್ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ ಎನ್ನುವುದು ನಮಗೆ ತಿಳಿದಿತ್ತು. ಹೀಗಾಗಿ ಅವರ ಆಶೀರ್ವಾದ ಪಡೆದುಕೊಳ್ಳಲು ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ” ಎಂದು ತಿಳಿಸಿದ್ದಾರೆ.
“ನಿಮ್ಮನ್ನು ಎಲ್ಲರೂ ಗೌರವಿಸುತ್ತೇವೆ. ಆದರೆ ಎನ್‌ಸಿಪಿ ಒಂದಾಗಿ ಇರಬೇಕು. ಈ ಬಗ್ಗೆ ನೀವು ಸೂಕ್ತವಾಗಿ ಆಲೋಚಿಸಿ, ಭವಿಷ್ಯದಲ್ಲಿ ಸಲಹೆ ನೀಡಿ ಎಂದು ಮನವಿ ಮಾಡಿದ್ದೆ. ಆದರೆ ಇದಕ್ಕೆ ಶರದ್ ಪವಾರ್ ನಮಗೆ ಉತ್ತರ ನೀಡಲಿಲ್ಲ. ನಾವು ಏನು ಹೇಳುತ್ತಿದ್ದೆವೋ ಅವರು ಅದನ್ನು ಸುಮ್ಮನೆ ಆಲಿಸುತ್ತಾ ಇದ್ದರು. ಅವರನ್ನು ಭೇಟಿ ಮಾಡಿದ ಬಳಿಕ ನಾವು ವಾಪಸ್ ಹೋಗುತ್ತಿದ್ದೇವೆ” ಎಂದು ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
“ಅಜಿತ್ ಸೇರಿದಂತೆ ಬಂಡಾಯ ಶಾಸಕರು ಪಕ್ಷದ ಒಳಗೆ ಉಂಟಾಗಿರುವ ವಿಭಜನೆಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಪಕ್ಷವು ಒಗ್ಗಟ್ಟಿನಿಂದ ಉಳಿಯುವಂತೆ ನೋಡಿಕೊಳ್ಳಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಹಿರಿಯ ನಾಯಕರಿಗೆ ಮನವಿ ಮಾಡಿದರು. ಶರದ್ ಪವಾರ್ ಇದನ್ನೆಲ್ಲ ಆಲಿಸಿದರು. ಆದರೆ ಅವರಿಗೆ ಏನನ್ನೂ ಹೇಳಲಿಲ್ಲ” ಎಂದು ಶರದ್ ಪವಾರ್ ಅವರ ಆಪ್ತ ಜಯಂತ್ ಪಾಟೀಲ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ಚಿರಾಗ್ ಪಾಸ್ವಾನ್‌ಗೆ ಆಹ್ವಾನ ನೀಡಿದ ಜೆ ಪಿ ನಡ್ಡಾ
“ಅಜಿತ್ ಪವಾರ್ ಸೇರಿದಂತೆ ಬಂಡಾಯ ನಾಯಕರ ಸಭೆಯು ದಿಢೀರನೆ ನಡೆದಿದೆ. ನಾವು ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಾವು ಶರದ್ ಪವಾರ್ ಅವರ ಜತೆ ಕುಳಿತು ಇದನ್ನು ಮಾತನಾಡುತ್ತೇವೆ. ಇದರ ಬಳಿಕ ನಮಗೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಲಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾವು ಸರ್ಕಾರಕ್ಕೆ ಬೆಂಬಲ ನೀಡಿಲ್ಲ. ಹೀಗಾಗಿ ವಿರೋಧ ಪಕ್ಷಗಳ ಸಾಲಿನಲ್ಲಿ ನಮಗೆ ಸೂಕ್ತ ಸ್ಥಾನಕ್ಕೆ ಸ್ಪೀಕರ್ ವ್ಯವಸ್ಥೆ ಮಾಡಲಿದ್ದಾರೆ” ಎಂದು ಶರದ್ ಪವಾರ್ ಬಣದ ಜಯಂತ್ ಪಾಟೀಲ್ ತಿಳಿಸಿದ್ದಾರೆ.
ತಮ್ಮ ಬಳಿ 20 ಶಾಸಕರು ಇದ್ದಾರೆ. ಇನ್ನು ಕೆಲವರು ಎರಡೂ ಬಣಗಳನ್ನು ಬೆಂಬಲಿಸುತ್ತಿದ್ದಾರೆ. ಆದರೆ ಅವರೆಲ್ಲರೂ ಶರದ್ ಪವಾರ್ ಅವರ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ಜಯಂತ್ ಪಾಟೀಲ್ ಹೇಳಿದ್ದಾರೆ.