ಮಹಾರಾಷ್ಟ್ರ ಎನ್‌ಸಿಪಿ ರಾಜಕೀಯದಲ್ಲಿ ಮಿಂಚಿನ ರಾಜಕೀಯ ಬದಲಾವಣೆ ಉಂಟಾಗಿದೆ. ಶರತ್ ಪವಾರ್‌ಗೆ ಮತ್ತೆ ಕೈಕೊಟ್ಟ ಸೋದರಳಿಯ ಅಜಿತ್ ಪವಾರ್, ತನ್ನ ಬೆಂಬಲಿಗ ಶಾಸಕರೊಂದಿಗೆ ಶಿಂಧೆ – ಫಡ್ನವೀಸ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.
ಇದರ ಭಾಗವಾಗಿ ತುರ್ತಾಗಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಜಿತ್ ಪವಾರ್ ಡಿಸಿಎಂ ಆಗಿ ಹಾಗೂ ಅವರ ಪಕ್ಷದ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಂತ್ರಿಯಾದವರಲ್ಲಿ ಛಗನ್ ಬುಜ್‌ಬಲ್, ಧನಂಜಯ್ ಮುಂಡೆ, ದಿಲೀಪ್ ವಲ್ಸೆ ಪಾಟೀಲ್ ಕೂಡ ಸೇರಿದ್ದಾರೆ.
ಅಜಿತ್ ಪವಾರ್ ಇತ್ತೀಚಿಗಷ್ಟೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ಸೇರ್ಪಡೆಗೊಂಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಅಜಿತ್ ಪವಾರ್ 2ನೇ ಡಿಸಿಎಂ ಆಗಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, 53 ಎನ್‌ಸಿಪಿ ಶಾಸಕರ ಪೈಕಿ 43 ಶಾಸಕರ ಬೆಂಬಲವನ್ನು ಅಜಿತ್ ಪವಾರ್ ಹೊಂದಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ನವದೆಹಲಿ: ಮೇಲ್ಸೇತುವೆ ನಿರ್ಮಾಣಕ್ಕಾಗಿ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಕಟ್ಟಡಗಳ ತೆರವು
ಇಂದು ಮುಂಜಾನೆ, ಎನ್‌ಸಿಪಿ ಶಾಸಕರ ಗುಂಪು ಅಜಿತ್ ಪವಾರ್ ಅವರ ಮುಂಬೈ ನಿವಾಸದಲ್ಲಿ ಸಭೆ ನಡೆಸಿತು. ಅಲ್ಲಿ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಹಿರಿಯ ನಾಯಕ ಛಗನ್ ಭುಜಬಲ್ ಕೂಡ ಹಾಜರಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಸಭೆಗೆ ಹಾಜರಾಗಿರಲಿಲ್ಲ.
ಅಜಿತ್ ಪವಾರ್ 2019 ರಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿ ಶರದ್ ಪವಾರ್ ಬಣಕ್ಕೆ ಮರಳಿದ್ದರು.