ಡಿ ಕೆ ಶಿವಕುಮಾರ್ – ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಪತನವಾಗುತ್ತೆ ಎಂದು ಹೇಳಿಕೆ ನೀಡಿರುವ ಆರ್ ಅಶೋಕ ವಿರುದ್ಧ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಲೇವಡಿ ಮಾಡಿದ್ದಾರೆ.
“ಆರ್ ಅಶೋಕ ಅವರು ಯಾವಾಗ ಭವಿಷ್ಯ ಹೇಳೋಕೆ ಶುರು ಮಾಡಿದರು? ಎಲ್ಲಿ ತರಬೇತಿ ತಗೊಂಡಿದ್ದಾರೆ? ಯಾರ ಕಡೆ ಭವಿಷ್ಯ ಕಲಿತಿದ್ದಾರೆ ಗೊತ್ತಿಲ್ಲ. ಪಾಪ ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಹತಾಶೆಯ ಪ್ರತೀಕವಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ” ಎಂದು ಬಾಗಲಕೋಟೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
“ಪಕ್ಷದಲ್ಲಿ ಇದ್ದಾಗ ಪೇ ಸಿಎಂ ಅಂತೆಲ್ಲ ಆರೋಪ ಮಾಡಿರುವ ಬಗ್ಗೆ ಗೌಪ್ಯವಾಗಿ ತನಿಖೆ ನಡೆದಿದೆ. ಬಿಜೆಪಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಒಂದೊಂದಾಗಿ ಬಯಲಿಗೆಳೆಯುತ್ತೇವೆ. ಅದರಲ್ಲೇನು ಅನುಮಾನ ಇಟ್ಕೊಬೇಡಿ. ನಾವು ಹೇಳಿದ್ದನ್ನೇ ಮಾಡುತ್ತೇವೆ” ಎಂದರು.
ಅಕ್ಕಿ ಅವರ ಅಪ್ಪನ ಮನೆಯದಲ್ಲ
ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ನೀಡಬೇಕು ಎಂಬ ಬಿಜೆಪಿ ನಾಯಕರ ಒತ್ತಾಯದ ವಿಚಾರವಾಗಿ ಪ್ರತಿಕ್ರಿಯಿಸಿ, “ಅಕ್ಕಿ ಬಿಜೆಪಿ ನಾಯಕರ ಅಪ್ಪನ ಮನೆಯದಲ್ಲ. ಅದು ನಮ್ಮ ಆಸ್ತಿ. ನಮಗೂ ಕೊಡಬೇಕು, ಆಹಾರ ಭದ್ರತಾ ಕಾಯಿದೆಯಡಿ ನಾವು ಕೊಟ್ಟೀವಿ, ನೀವು ಕೊಡಬೇಕು” ಎಂದರು.
ಧಮ್ಮು, ತಾಕತ್ತು ತಿಳಿದೇ ಜನ ತಿರಸ್ಕರಿಸಿದ್ದು
ಬೊಮ್ಮಾಯಿ ಅವರ ದಮ್ಮು ತಾಕತ್ತು ತಿಳಿದೇ ಜನರು ಅವರನ್ನು ತಿರಸ್ಕರಿಸಿದ್ದು. ಆ ದಮ್ಮು ತಾಕತ್ತು ಗೊತ್ತಾಗಿಯೇ ಜನತೆ ನಮ್ಮನ್ನ ಅಧಿಕಾರಕ್ಕೆ ತಂದಿರುವುದು ಎಂದು ಕುಟುಕಿದರು.