ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತದ ವತಿಯಿಂದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ನೇತೃತ್ವದಲ್ಲಿ ಆಲಮಟ್ಟಿ ಜಲಾಶಯದ ಬಳಿ ಕೃಷ್ಣಾ ನದಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಣೆ ಮಾಡಿದರು.
ಬಾಗಿನ ಅರ್ಪಣೆ ಮಾಡಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಆಲಮಟ್ಟಿ ಜಲಾಶಯದ ಅಣೆಕಟ್ಟಿನ ಎತ್ತರದ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳ ವಿಶೇಷ ಸಭೆಯನ್ನು ಪ್ರಧಾನಿ ಮೋದಿ ಅವರು ಶೀಘ್ರದಲ್ಲೇ ಕರೆಯಬೇಕು” ಎಂದು ಆಗ್ರಹಿಸಿದರು.
“ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಎರಡನೇ ಹಂತದ ನ್ಯಾಯಾಧೀಕರಣದ ತೀರ್ಪಿನ ನಂತರ ನೋಟಿಫಿಕೇಷನ್ ಆಗಿಲ್ಲ. ಇದು ಆಗುವವರೆಗೂ ಆಣೆಕಟ್ಟು ಎತ್ತರ ಅಸಾಧ್ಯ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಈ ಸಭೆ ಆಯೋಜಿಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯ ಸರಕಾರ ಕೂಡಾ ಕೃಷ್ಣಾ ಕೊಳ್ಳದ ಫಲಾನುಭವಿ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ಎಲ್ಲ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಶೀಘ್ರದಲ್ಲಿ ಕರೆಯಲಿದೆ. ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣಕ್ಕೆ ಸದ್ಯದ ಕಾಲಘಟ್ಟದಲ್ಲಿ 80 ಸಾವಿರ ಕೋಟಿ ರೂ. ಖರ್ಚಾಗುವ ನಿರೀಕ್ಷೆ ಇದೆ” ಎಂದು ಮಾಹಿತಿ ನೀಡಿದರು.
“ಎಚ್ ಡಿ ಕುಮಾರಸ್ವಾಮಿ ಅರೆಸ್ಟ್ ಮಾಡೋಕೆ ನೂರು ಸಿದ್ದರಾಮಯ್ಯ ಬೇಕಿಲ್ಲ. ಒಬ್ಬ ಕಾನ್‌ಸ್ಟೇಬಲ್ ಸಾಕು” ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು.
ಮುಡಾ : ದಾಖಲೆ ತಿದ್ದಿಲ್ಲ
“ಮುಡಾ ಹಗರಣದಲ್ಲಿ ನನ್ನ ಪಾತ್ರ, ಪ್ರಭಾವವಿಲ್ಲ. ಯಾವ ದಾಖಲೆಯನ್ನೂ ತಿದ್ದಿಲ್ಲ. ವೈಟನರ್ ಹಚ್ಚಿ ದಾಖಲೆಯಲ್ಲಿ ತಿದ್ದುಪಡಿ ಮಾಡಿಲ್ಲ” ಎಂದು ಇದೇ ವೇಳೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.