‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ ಎಫ್‍ಎಸ್‍ಎಲ್ ವರದಿ ಸರ್ಕಾರದ ಕೈ ಸೇರಿಲ್ಲ. ಆದಷ್ಟು ಬೇಗ ವರದಿ ನೀಡುವಂತೆ ಪ್ರಯೋಗಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ಮಾಧ್ಯಮದಲ್ಲಿ ಪ್ರಸಾರವಾದ ದೃಶ್ಯ ಅಥವಾ ಒಂದು ಕ್ಲಿಪ್ಪಿಂಗ್‍ಗೆ ಸಂಬಂಧಿಸಿದಂತೆ ತನಿಖೆ ಸೀಮಿತವಾಗುವುದಿಲ್ಲ. ಇರುವ ಎಲ್ಲಾ ದೃಶ್ಯಗಳನ್ನೂ ಪಡೆದುಕೊಂಡು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದೇವೆ” ಎಂದರು.
“ಈಗಾಗಲೇ 7 ಜನರನ್ನು ಕರೆಸಿ, ಹೇಳಿಕೆ ಪಡೆದು, ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದೇವೆ. ಪ್ರಯೋಗಾಲಯದ ವರದಿ ಬಂದ ಬಳಿಕ ಧ್ವನಿ ಮಾದರಿಗಳನ್ನು ಹೋಲಿಕೆ ಮಾಡಲಾಗುತ್ತದೆ. ಶಂಕೆ ಇರುವವರ ಧ್ವನಿ ಮಾದರಿಗಳನ್ನೂ ಸಂಗ್ರಹಿಸಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಪಾಕ್ ಪರ ಘೋಷಣೆ ಆರೋಪ | ವಿಚಾರಣೆಗೆ 26 ಮಂದಿಯ ಪಟ್ಟಿ ತಯಾರು, 8 ಜನರ ವಿಚಾರಣೆ
ಸಂಪುಟ ಸಭೆಯಲ್ಲಿ ತೀರ್ಮಾನ
“ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದೆ. ಅದರ ಕುರಿತು ಸಂಪುಟದಲ್ಲಿ ಔಪಚಾರಿಕ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ವರದಿಯ ಕುರಿತು ಸವಿಸ್ತಾರವಾದ ಚರ್ಚೆ ನಡೆಸಲಾಗುವುದು” ಎಂದರು.
“ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿಗೆ ಸಂಬಂಧಿಸಿದಂತೆ ಸಂಪುಟ ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಸಭೆಯಲ್ಲಿ ತಿಳಿಸಿದ್ದಾರೆ” ಎಂದು ತಿಳಿಸಿದರು.
“ವರದಿಯನ್ನು ಉಭಯ ಸದನಗಳಲ್ಲಿ ಮಂಡಿಸಬೇಕೇ ಅಥವಾ ಸರ್ಕಾರವೇ ನೇರವಾಗಿಯೇ ವರದಿಯನ್ನು ಬಹಿರಂಗ ಪಡಿಸಬೇಕೇ ಎಂಬುದನ್ನು ಸಂಪುಟ ನಿರ್ಧರಿಸಬೇಕಾಗುತ್ತದೆ. ಎಲ್ಲಾ ಸಚಿವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ” ಎಂದು ಪರಮೇಶ್ವರ್ ಹೇಳಿದರು.
“ಸರ್ಕಾರ ಸ್ವೀಕರಿಸಿರುವ ವರದಿ ಕಾಂತರಾಜ ಅಥವಾ ಜಯಪ್ರಕಾಶ್ ಹೆಗ್ಡೆ ವರದಿಯೆಂದಾಗುವುದಿಲ್ಲ. ಅದು ಹಿಂದುಳಿದ ವರ್ಗಗಳ ಆಯೋಗದ ವರದಿ ಮಾತ್ರ” ಎಂದು ಸ್ಪಷ್ಟಪಡಿಸಿದರು.
