ಲೋಕಸಭಾ ಚುನಾವಣೆಯ ಸಮಯದಲ್ಲಿ ಒಗ್ಗೂಡಿದ್ದ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ಅಸಮಾಧಾನ, ವಿರೋಧಗಳು ವ್ಯಕ್ತವಾಗುತ್ತಿವೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ಎಎಪಿ ಮತ್ತು ಕಾಂಗ್ರೆಸ್ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗಿಳಿದಿವೆ. ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿರುವ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ (ಉದ್ದವ್ ಬಣ) ಘೋಷಿಸಿದೆ. ಇದೆಲ್ಲವೂ, ಇಂಡಿಯಾ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬುದನ್ನು ಸೂಚಿಸುತ್ತಿದೆ.
ಈ ನಡುವೆ, ಮುಂಬೈ ಪಾಲಿಕೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ (ಶರದ್ ಬಣ) ನಾಯಕ ಶರದ್ ಪವಾರ್, “ಇಂಡಿಯಾ ಬಣವನ್ನು ರಾಷ್ಟ್ರೀಯ ಮಟ್ಟದ ಚುನಾವಣೆಗಳಿಗಾಗಿ ಮಾತ್ರ ರಚಿಸಲಾಗಿದೆ. ಪುರಸಭೆ ಅಥವಾ ರಾಜ್ಯ ಚುನಾವಣೆಗಳಲ್ಲಿ ಒಟ್ಟಿಗೆ ಸ್ಪರ್ಧೆ ಮಾಡುವ ಬಗ್ಗೆ ಏನೂ ಚರ್ಚಿಸಲಾಗಿಲ್ಲ” ಎಂದಿದ್ದಾರೆ. ಆ ಮೂಲಕ ಮುಂಬೈ ಸ್ಥಳೀಯ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂಬ ಸುಳಿವು ನೀಡಿದ್ದಾರೆ.
“ಇಂಡಿಯಾ ರಂಗ ರಚನೆಯಾದಾಗ, ಚರ್ಚೆ ರಾಷ್ಟ್ರೀಯ ಸಮಸ್ಯೆಗಳು ಮತ್ತು ಚುನಾವಣೆಗಳ ಬಗ್ಗೆ ಮಾತ್ರ. ಸ್ಥಳೀಯ ಸಂಸ್ಥೆ ಚುನಾವಣೆ ಅಥವಾ ರಾಜ್ಯ ಚುನಾವಣೆಗಳ ಬಗ್ಗೆ ಯಾವುದೇ ಚರ್ಚೆ ಇರಲಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಗಳು ಒಟ್ಟಾಗಿ ಅಥವಾ ಏಕಾಂಗಿಯಾಗಿ ಸ್ಪರ್ಧಿಸುತ್ತವೆಯೇ ಎಂದು ನಿರ್ಧರಿಸಲು ಎಂವಿಎ ಸಭೆ ನಡೆಸಲಾಗುವುದು” ಎಂದು ಶರದ್ ಪವಾರ್ ಹೇಳಿದ್ದಾರೆ.
“ಮಹಾರಾಷ್ಟ್ರದಲ್ಲಿ ಮುಂಬರುವ ಪುರಸಭೆ ಚುನಾವಣೆಯಲ್ಲಿ, ನಾವು ಒಟ್ಟಾಗಿ ಅಥವಾ ಏಕಾಂಗಿಯಾಗಿ ಹೋರಾಡುತ್ತೇವೆಯೇ ಎಂಬುದರ ಬಗ್ಗೆ 8-10 ದಿನಗಳಲ್ಲಿ ಸಭೆ ನಡೆಸಿ, ನಿರ್ಧರಿಸುತ್ತೇವೆ. ಮೈತ್ರಿಕೂಟದೊಳಗೆ ನಮಗೆ ಸಂವಹನವಿದೆ” ಎಂದಿದ್ದಾರೆ.
ಪವಾರ್ ಅವರ ಈ ಹೇಳಿಕೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯು ಒಡೆಯುತ್ತಿದೆ ಎಂಬ ವದಂತಿಗಳಿಗೆ ಮತ್ತಷ್ಟು ಬಲ ತುಂಬಿದೆ.