- ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಶಾಸಕ ಎಸ್.ಶಫಿ ಅಹ್ಮದ್
- ವಾಟ್ಸಪ್‌ನಲ್ಲಿ ದೇವೇಗೌಡ, ಕುಮಾರಸ್ವಾಮಿಗೆ ರಾಜೀನಾಮೆ ಪತ್ರ ರವಾನೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂಬ ಮಾಹಿತಿ ಜೆಡಿಎಸ್ ವರಿಷ್ಠರಿಂದ ಸ್ಪಷ್ಟವಾಗುತ್ತಿದ್ದಂತೆ ಪಕ್ಷದೊಳಗಿನ ಮುಸ್ಲಿಂ ಮುಖಂಡರೆಲ್ಲ ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ.
ಕಳೆದ ಶನಿವಾರ ಜನತಾದಳ (ಜಾತ್ಯತೀತ) ಕರ್ನಾಟಕ ಘಟಕದ ಉಪಾಧ್ಯಕ್ಷ ಸೈಯದ್ ಶಫೀವುಲ್ಲಾ ಸಾಹೇಬ್ ಅವರು ಕೇಸರಿ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಬಿಜೆಪಿ ಜತೆಗಿನ ಮೈತ್ರಿಯನ್ನು ವಿರೋಧಿಸಿ ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ತುಮಕೂರು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕ ಹಾಗೂ ಮಾಜಿ ಶಾಸಕ ಎಸ್.ಶಫಿ ಅಹ್ಮದ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎಸ್.ಶಫಿ ಅಹ್ಮದ್ ಅವರು ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವ ಮತ್ತು ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪತ್ರವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ವಾಟ್ಸಪ್ ಮೂಲಕ ರವಾನಿಸಿದ್ದಾರೆ.
ಜೆಡಿ(ಎಸ್) ಪಕ್ಷಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ಅಹ್ಮದ್ ತಮ್ಮ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು
ಎಸ್.ಶಫಿ ಅಹ್ಮದ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಆದರೆ ಈಗ ಅವರ ಮುಂದಿನ ನಡೆಯ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಬಿಜೆಪಿ ಜತೆ ಕೈಜೋಡಿಸಲು ಪಕ್ಷ ನಿರ್ಧರಿಸಿದ ಬೆನ್ನಲ್ಲೇ ಜೆಡಿಎಸ್‌ನ ಅಲ್ಪಸಂಖ್ಯಾತ ಮುಖಂಡರು ಈಗಾಗಲೇ ಸಭೆ ನಡೆಸಿದ್ದಾರೆ. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಈ ಬೆಳವಣಿಗೆಯ ಬಗ್ಗೆ ಮೌನ ಮುರಿದಿಲ್ಲ. ಆದರೆ ಅವರು ಕೂಡ ಪಕ್ಷವನ್ನು ತೊರೆಯಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.