ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು ಎಂದು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ಸಚಿವ ಸಂಜಯ ನಿಷಾದ್ ಟೀಕಿಸಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆ ಕುರಿತು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆತ್ಮಾವಲೋಕನ ಮುಂದುವರೆದಿದೆ.
ರಾಜಕಾರಣದಲ್ಲಿ ಬಡವರ ಮನೆಮಠಗಳನ್ನು ಕೆಡವಿ ಅಳಿಸಿ ಹಾಕಿದರೆ, ಬಡವರು ನಮ್ಮನ್ನು ಕೆಡವುತ್ತಾರೆ ಎಂದು ಬಿಜೆಪಿ ಮಿತ್ರಪಕ್ಷ ನಿಷಾದ್ ಪಾರ್ಟಿಯ ಮುಖ್ಯಸ್ಥ ಸಂಜಯ ನಿಷಾದ್ ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸೋಲಿಗೆ ರಾಜ್ಯ ಸರ್ಕಾರದ ಆಡಳಿತವೇ ಕಾರಣ ಎಂಬ ಮಿತ್ರ ಪಕ್ಷಗಳ ದೂರಿಗೆ ಅವರು ದನಿಗೂಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಗೆಲುವು ಒಟ್ಟು 80 ಸ್ಥಾನಗಳಲ್ಲಿ 62ರಿಂದ 33 ಕ್ಕೆ ಕುಸಿದಿತ್ತು. ನಿಷಾದ್ ಅವರ ಮಗ ಪ್ರವೀಣ್ ನಿಷಾದ್ ಸಂತ ಕಬೀರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿಗಾಗಿ ಒಳಗೊಳಗೇ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶದ ನೌಕರಶಾಹಿಯೇ ಬುಲ್ಡೋಜರ್ ಗಳ ದುರ್ಬಳಕೆಗೆ ಕಾರಣರು ಎಂದು ನಿಷಾದ್ ಆರೋಪಿಸಿದ್ದಾರೆ.
ಲಕ್ನೋದಲ್ಲಿ ಕುಕ್ರೇಲ್ ನದಿ ಪುನಶ್ಚೇತನ ಯೋಜನೆ ಸಂಬಂಧ ಬುಲ್ಡೋಜರ್ ಕಾರ್ಯಚರಣೆ ಜರುಗಿದೆ. ಅನಗತ್ಯ ಕಾರ್ಯಾಚರಣೆ ನಡೆಸಿದ್ದರೆ ಪರಿಶೀಲಿಸಿ ತಪ್ಪಿತಸ್ಥರೆಂದು ಕಂಡು ಬರುವ ಅಧಿಕಾರಿ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಲಾಗುವುದು ಎಂದು ನಿಷಾದ್ ಹೇಳಿಕೆ ಹೊರ ಬಿದ್ದ ಕೆಲವೇ ತಾಸುಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟ್ವೀಟ್ ಮಾಡಿದ್ದಾರೆ.
ಬುಲ್ಡೋಜರ್ ಇರೋದು ‘ಮಾಫಿಯಾ’ವನ್ನು ಮಟ್ಟ ಹಾಕಲು ಮತ್ತು ರಸ್ತೆಗಳನ್ನು ಮಾಡಲೆಂದೇ ವಿನಾ ಬಡವರ ಮನೆಮಠ ಕೆಡವಲು ಅಲ್ಲ. ಬಡ ವೃದ್ಧೆಯೊಬ್ಬಳು 90 ವರ್ಷಗಳಿಂದ ವಾಸಿಸುತ್ತ ಬಂದಿರುವ ವಸತಿಯ ಮೇಲೆ ಬುಲ್ಡೋಜರ್ ಹರಿಸಲಾಗಿದೆ. ವಾತಾವರಣ ಈಗಾಗಲೇ ಕೆಟ್ಟಿದೆ. ಅಧಿಕಾರಿಗಳು ಅದನ್ನು ಮತ್ತಷ್ಟು ಹದಗೆಡಿಸುತ್ತಿದ್ದಾರೆ ಎಂದು ನಿಷಾದ್ ಸುದ್ದಿಗಾರರ ಮುಂದೆ ದೂರಿದರು.
ಜೋನ್ಪುರ್ ಜಿಲ್ಲೆಯ ಮಹಿಳೆಯೊಬ್ಬಳು ತನ್ನ ಗ್ರಾಮಪ್ರಧಾನ್ ವಿರುದ್ಧ ದೂರು ಕೊಟ್ಟ ಕಾರಣ ಆಕೆಯ ಮನೆಯ ಮೇಲೆ ಬುಲ್ಡೋಜರ್ ಹರಿಸಲಾಗಿದೆ ಎಂಬ ಉದಾಹರಣೆಯನ್ನು ನಿಷಾದ್ ನೀಡಿದರು. ಬುಲ್ಡೋಜರ್ ನ್ನು ಗರೀಬರ ಮೇಲೆ ಚಲಾಯಿಸಿದರೆ ಅದರ ಬೆಲೆಯನ್ನು ತೆರಲೇಬೇಕಾಗುತ್ತದೆ. ಬುಲ್ಡೋಜರ್ ಗಳನ್ನು ಮಾಫಿಯಾ ಮೇಲೆ ಬಳಸಬೇಕು. ಅಭಿವೃದ್ಧಿಗಾಗಿ ಬಳಸಬೇಕಾದರೂ ಮೊದಲು ಬಡಜನರಿಗೆ ಸೂಕ್ತ ಮರುವಸತಿ ಕಲ್ಪಿಸಲು ಎಚ್ಚರಿಕೆ ವಹಿಸಲೇಬೇಕು. ಆದರೆ ಹೀಗಾಗುತ್ತಿಲ್ಲ ಎಂದರು.
ಸರ್ಕಾರಕ್ಕಿಂತ ಪಕ್ಷ ದೊಡ್ಡದು, ಕಾರ್ಯಕರ್ತರು ದೊಡ್ಡವರು. ರಾಜಕೀಯ ಶಕ್ತಿಗಿಂತ ಸಾರ್ವಜನಿಕ ಶಕ್ತಿ ದೊಡ್ಡದು ಎಂಬ ಉಪಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಅವರ ಹೇಳಿಕೆಯನ್ನು ನಿಷಾದ್ ಬೆಂಬಲಿಸಿದ್ದಾರೆ. ಅಧಿಕಾರವು ಆದಿತ್ಯನಾಥ ಸರ್ಕಾರದಲ್ಲಿ ಕೇಂದ್ರೀಕರಿಸಿ ಹೋಗಿದೆ ಎಂಬುದಾಗಿ ಮೌರ್ಯ ಹೇಳಿಕೆಯನ್ನು ವ್ಯಾಖ್ಯಾನ ಮಾಡಲಾಗಿತ್ತು.
ಈ ವರದಿ ಓದಿದ್ದೀರಾ?: ಪ್ರಧಾನಿ ಮೋದಿಯ ‘ಚೈಲ್ಡಿಶ್’ ಹೇಳಿಕೆಯೂ, ಉಸಿರುಗಟ್ಟಿಸುವ ‘ಪ್ರೌಢಾವಸ್ಥೆ’ ಸಿದ್ಧಾಂತವೂ
ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದವರು ಮತ್ತು ದಲಿತರಿಗೆ ಮೀಸಲಿಟ್ಟ ಹುದ್ದೆಗಳು ಜನರಲ್ ಕೆಟಗರಿ ಅಭ್ಯರ್ಥಿಗಳ ಪಾಲಾಗುತ್ತಿವೆ ಎಂದು ದೂರಿ ಮತ್ತೊಂದು ಮಿತ್ರಪಕ್ಷ ಅಪ್ನಾದಲ್ (ಎಸ್) ಮುಖ್ಯಸ್ಥೆ ಮತ್ತು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರು ಇತ್ತೀಚೆಗೆ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಬಹಿರಂಗಗೊಳಿಸಿದ್ದರು ಕೂಡ.
ಕುಕ್ರೇಲ್ ನದಿ ಪುನಶ್ಚೇತನ ಯೋಜನೆಯಿಂದ ಬಾಧಿತರಾಗಿರುವ ಕುಟುಂಬಗಳಿಗೆ ಅಭಯ ನೀಡಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಕುಟುಂಬಗಳನ್ನು ಭೇಟಿ ಮಾಡಬೇಕು. ಎಲ್ಲ ನಿವಾಸಿಗಳ ಸುಭದ್ರತೆ ಮತ್ತು ಸಂತೃಪ್ತಿ ಸರ್ಕಾರದ ಹೊಣೆಗಾರಿಕೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.