ಲೋಕಸಭೆ ಸ್ಪೀಕರ್ ಆಗಿ ಮತ್ತೆ ಆಯ್ಕೆಯಾದ ಓಂ ಬಿರ್ಲಾ ಅವರಿಗೆ ಅಭಿನಂದಿಸಿದ ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ “ಜನರ ಧ್ವನಿಯನ್ನು ಪ್ರತಿನಿಧಿಸಲು, ಮಾತನಾಡಲು ನಮಗೂ ಅವಕಾಶ ಕೊಡಿ” ಎಂದು ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ವಿಪಕ್ಷ ನಾಯಕರಾದ ಬಳಿಕ ಲೋಕಸಭೆಯಲ್ಲಿ ಮೊದಲ ಭಾಷಣವನ್ನು ಮಾಡಿದ್ದು ಇಂಡಿಯಾ ಒಕ್ಕೂಟದ ಪರವಾಗಿ ನೂತನವಾಗಿ ಆಯ್ಕೆಯಾದ ಸ್ಪೀಕರ್‌ಗೆ ಅಭಿನಂದಿಸಿದರು. ಜೊತೆಗೆ ಲೋಕಸಭೆಯು ಯಾವ ರೀತಿ ನಡೆಯಬೇಕು ಎಂದು ವಿವರಿಸಿದರು.
“ಕೆಳಮನೆ (ಲೋಕಸಭೆ) ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಈ ಧ್ವನಿಯ ಅಂತಿಮ ತೀರ್ಪುಗಾರರು ನೀವು. ಖಂಡಿತವಾಗಿಯೂ ಸರ್ಕಾರಕ್ಕೆ ರಾಜಕೀಯ ಬಲವಿದೆ. ಆದರೆ ವಿಪಕ್ಷಗಳು ಕೂಡಾ ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ಕಳೆದ ಬಾರಿಗಿಂತ ಈ ಬಾರಿ ವಿಪಕ್ಷಗಳು ಗಮನಾರ್ಹವಾಗಿ ಅಧಿಕ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ
“ನೀವು ಮಾಡುವ ಕೆಲಸಕ್ಕೆ ಬೆಂಬಲ ನೀಡುತ್ತೇವೆ. ಹಾಗೆಯೇ ಕೆಳಮನೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಾವು ಬಯಸುತ್ತೇವೆ. ಇದು ಅತೀ ಮುಖ್ಯ. ನಂಬಿಕೆಯ ಆಧಾರದಲ್ಲಿ ಸಹಕಾರ ಬೆಳೆಯುತ್ತದೆ. ಆದ್ದರಿಂದ ವಿಪಕ್ಷಗಳ ದನಿ ಅತೀ ಮುಖ್ಯವಾಗುತ್ತದೆ. ಈ ಮನೆಯಲ್ಲಿ ವಿಪಕ್ಷಗಳ ಪ್ರಾತಿನಿಧ್ಯಕ್ಕೆ ಅವಕಾಶ ಸಿಗಬೇಕು” ಎಂದು ಹೇಳಿದರು.
“ಜನರನ್ನು ಪ್ರತಿನಿಧಿಸಲು, ಮಾತನಾಡಲು, ದೇಶದ ಜನರ ದನಿಯನ್ನು ಪ್ರತಿನಿಧಿಸಲು ನಮಗೆ ನೀವು ಅವಕಾಶ ಮಾಡಿಕೊಡುತ್ತೀರಿ ಎಂಬ ವಿಶ್ವಾಸವಿದೆ. ಎಷ್ಟು ಪರಿಣಾಮಕಾರಿ ಸದನವು ನಡೆಯಲಿದೆ ಎಂಬುವುದು ಪ್ರಶ್ನೆಯಲ್ಲ. ಭಾರತದ ಎಷ್ಟು ಜನರ ಪ್ರತಿನಿಧಿಗಳಿಗೆ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ ಎಂಬುವುದು ಪ್ರಶ್ನೆಯಾಗಿದೆ” ಎಂದು ಅಭಿಪ್ರಾಯಿಸಿದರು.
LIVE: Welcoming the Speaker of the 18th Lok Sabha https://t.co/NvAdTFvoyP
— Rahul Gandhi (@RahulGandhi) June 26, 2024
“ವಿಪಕ್ಷ ನಾಯಕರುಗಳ ಧ್ವನಿಯನ್ನು ಮೌನಗೊಳಿಸುವ ಮೂಲಕ ನೀವು ಲೋಕಸಭೆಯನ್ನು ಪರಿಣಾಮಕಾರಿಯಾಗಿ ನಡೆಸಬಹುದು ಎಂಬ ಕಲ್ಪನೆಯು ಪ್ರಜಾಸತ್ತಾತ್ಮಕವಲ್ಲದ ಕಲ್ಪನೆಯಾಗಿದೆ” ಎಂದರು.
ಇನ್ನು “ವಿಪಕ್ಷಗಳು ಈ ದೇಶದ ಸಂವಿಧಾನವನ್ನು ರಕ್ಷಿಸಬೇಕೆಂದು ಜನರು ಬಯಸುತ್ತಾರೆ ಎಂಬುವುದು ಈ ಚುನಾವಣೆಯಲ್ಲಿ ತಿಳಿದುಬಂದಿದೆ. ವಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವ ಮೂಲಕ, ಭಾರತದ ಜನರನ್ನು ಪ್ರತಿನಿಧಿಸಲು ನಮಗೆ ಅವಕಾಶ ನೀಡುವ ಮೂಲಕ ಭಾರತದ ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ನೀವು ಮಾಡುತ್ತೀರಿ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.