- ಎಲ್ಲ ತಾಲೂಕುಗಳಲ್ಲೂ ಈವರೆಗೆ 600ಕ್ಕೂ ಅಧಿಕ ಟಾಸ್ಕ್‌ಫೋರ್ಸ್ ಸಭೆ
- ಬರ ಪರಿಹಾರ ಕಾರ್ಯಕ್ಕೆ ₹861.32 ಕೋಟಿ ಅನುದಾನ ಲಭ್ಯ
“ರಾಜ್ಯದಲ್ಲಿ ಪ್ರಸ್ತುತ ಬರ ಪರಿಸ್ಥಿತಿ ಹತೋಟಿಯಲ್ಲಿದ್ದು, ಮುಂದಿನ ಬೇಸಿಗೆಗೆ ರಾಜ್ಯದ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ 7108 ಬಾಡಿಗೆ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯ ನಡುವೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದಅವರು, “ರಾಜ್ಯದಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಕಂಡುಬಂದಿರುವ 116 ಗ್ರಾಮಗಳಿಗೆ 175 ಟ್ಯಾಂಕರ್ ಮೂಲಕ ಹಾಗೂ 382 ಗ್ರಾಮಗಳಿಗೆ 445 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಪ್ರತಿ ದಿನ ನೀರು ಪೂರೈಸಲಾಗುತ್ತಿದೆ. 9 ನಗರ ಸ್ಥಳೀಯ ಸಂಸ್ಥೆಗಳಲ್ಲಿನ 57 ವಾರ್ಡ್‌ಗಳಿಗೆ 24 ಟ್ಯಾಂಕರ್‌ಗಳ ಮೂಲಕ ಹಾಗೂ 29 ವಾರ್ಡ್‌ಗಳಿಗೆ 17 ಖಾಸಗಿ ಬೋರ್‌ವೆಲ್‌ಗಳ ಮೂಲಕ ತುರ್ತು ಕುಡಿಯುವ ನೀರು ಪೂರೈಸಲಾಗುತ್ತಿದೆ” ಎಂದು ತಿಳಿಸಿದರು.
“ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ 7377 ಗ್ರಾಮಗಳನ್ನು ಹಾಗೂ 1272 ವಾರ್ಡ್‌ಗಳನ್ನು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಒಟ್ಟು 7080 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ. ಬಹುತೇಕ ಬೋರ್‌ವೆಲ್ ಮಾಲೀಕರ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿಕೊಳ್ಳಲಾಗಿದೆ. ಗ್ರಾಮಪಂಚಾಯತ್ ಮಟ್ಟದಲ್ಲಿ ಟ್ಯಾಂಕರ್‌ಗಳ ಟೆಂಡರ್ ಮಾಡಿ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಸಮಸ್ಯೆ ಕಂಡುಬಂದ ಕೂಡಲೇ ಕುಡಿಯುವ ನೀರನ್ನು ಪೂರೈಸಲಾಗುವುದು” ಎಂದು ತಿಳಿಸಿದರು.
“ನೀರಿನ ಪೂರೈಕೆ ಸರ್ಕಾರದ ಆದ್ಯತೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು ಎಂಬ ನಿಟ್ಟಿನಲ್ಲಿ ಬಾಡಿಗೆ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವವರಿಗೆ ಯಾವುದೇ ನೆಪ ಇಲ್ಲದೆ 15 ದಿನಗಳಲ್ಲಿ ಬಿಲ್ಲು ಪಾವತಿಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ವಾಟರ್ ಟ್ಯಾಂಕರ್ ಗಳಿಗೆ ನ್ಯಾಯಯುತ ದರ ನಿಗದಿಗೊಳಿಸುವ ಬಗ್ಗೆಯೂ ಸಿದ್ದತೆ ಆಗುತ್ತಿದೆ” ಎಂದು ತಿಳಿಸಿದರು.
“ಡಿಸೆಂಬರ್‌ನಿಂದ ಈವರೆಗೆ ತಾಲೂಕು ಮಟ್ಟದ 600 ಸಭೆಗಳನ್ನು ನಡೆಸಲಾಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ 154 ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದೆ. ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ. 725.92 ಕೋಟಿ ಹಾಗೂ ತಹಶೀಲ್ದಾರ್ ಖಾತೆಯಲ್ಲಿ ರೂ.135.40 ಕೋಟಿ ಸೇರಿದಂತೆ ಒಟ್ಟು ರೂ. 861.32 ಕೋಟಿ ಅನುದಾನವು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಲಭ್ಯವಿದೆ” ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಕೇಂದ್ರದ ವೈಫಲ್ಯ ಕಾರಣವಲ್ಲವೇ?
ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.
