- ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪಯಣಿಸಿದ್ದ ರಾಹುಲ್ ಗಾಂಧಿ
- ರಾಷ್ಟ್ರೀಯ ಹೆದ್ದಾರಿ 44ರ ಮುರ್ತಾಲ್ ಢಾಬಾದಲ್ಲಿ ಚಾಲಕರ ಜೊತೆ ಮಾತುಕತೆ
ಇತ್ತೀಚೆಗೆ ದೆಹಲಿಯಿಂದ ಪಂಜಾಬ್‌ಗೆ ಟ್ರಕ್‌ನಲ್ಲಿ ಪಯಣಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರಯಾಣ ಹಾಗೂ ಟ್ರಕ್ ಚಾಲಕರೊಂದಿಗಿನ ಮಾತುಕತೆಯನ್ನು ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಸೋಮವಾರ (ಮೇ 29) ಹಂಚಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ನಂತರ ಈಗಲೂ ಜನರ ಜತೆಗೆ ರಾಹುಲ್ ಅವರು ಸಂವಾದ ನಡೆಸುತ್ತಿದ್ದಾರೆ. ಟ್ರಕ್ ಪಯಣದ ವೇಳೆ ರಾಷ್ಟ್ರೀಯ ಹೆದ್ದಾರಿ 44ರಲ್ಲಿಯ ಮುರ್ತಾಲ್ ಪ್ರದೇಶದ ಢಾಬಾದಲ್ಲಿ ಟ್ರಕ್ ಚಾಲಕರೊಂದಿಗೆ ಮಾತುಕತೆ ನಡೆಸಿದರು.
ಟ್ರಕ್ ಚಾಲಕರೊಂದಿಗಿನ ಪ್ರಯಾಣ ಒಂದು ಅದ್ಭುತ ಅನುಭವ ಎಂದು ರಾಹುಲ್ ಟ್ವಿಟರ್‌ನಲ್ಲೂ ಬರೆದಿದ್ದಾರೆ.
ಕಳೆದ ಸೋಮವಾರ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲೇ ಪ್ರಯಾಣಿಸಿದ್ದ ರಾಹುಲ್ ಗಾಂಧಿ ಚಾಲಕರ ಜತೆ ಮಾತನಾಡಿ ಅವರ ಕುಂದು ಕೊರತೆ ಆಲಿಸಿದ್ದರು. ಆ ಪ್ರಯಾಣದ ವಿಡಿಯೋವನ್ನು ರಾಹುಲ್ ಈಗ ಹಂಚಿಕೊಂಡಿದ್ದಾರೆ.
ಬಿಳಿ ಟಿ ಶರ್ಟ್ ಧರಿಸಿರುವ ರಾಹುಲ್ ಅವರು ಟ್ರಕ್‌ನೊಳಗೆ ಕುಳಿತು ಚಾಲಕರೊಂದಿಗೆ ಪ್ರಯಾಣಿಸುತ್ತಿರುವುದು ಮತ್ತು ಢಾಬಾದಲ್ಲಿ ಇತರ ಚಾಲಕರೊಂದಿಗೆ ಮಾತನಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ.
“ಆರು ಗಂಟೆಗಳ ಕಾಲದ ದೆಹಲಿ-ಚಂಡೀಗಢ ಪ್ರಯಾಣದಲ್ಲಿ ಟ್ರಕ್ ಚಾಲಕರ ಜೊತೆ ಆಸಕ್ತಿದಾಯಕ ಮಾತುಕತೆ ನಡೆಸಿದೆ. 24 ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯುವುದರಿಂದ ಅವರು ಭಾರತದ ಪ್ರತಿ ಮೂಲೆಯನ್ನು ಒಗ್ಗೂಡಿಸುತ್ತಾರೆ” ಎಂದು ರಾಹುಲ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಟ್ರಕ್ ಚಾಲಕರ ಜೊತೆಗಿನ ಪಯಣವನ್ನು ತಮ್ಮ ಅಧಿಕೃತ ಯೂಟ್ಯೂಬ್ ಪುಟದಲ್ಲಿಯೂ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ ವಿವಿಯಲ್ಲಿ ಗಾಂಧಿ ಚಿಂತನೆ ಬದಲಿಗೆ ಸಾವರ್ಕರ್ ಚಿಂತನೆ ಓದಿಗೆ ಒತ್ತು; ಅಧ್ಯಾಪಕರ ವಿರೋಧ
ಪಯಣದ ವೇಳೆ ಉತ್ತರ ಪ್ರದೇಶದ ಫಿರೋಜಾಬಾದ್‌ನ ಪ್ರೇಮ್ ರಜ್‌ಪೂತ್ ಅವರು ರಾಹುಲ್ ಅವರ ಜೊತೆಯಾದರು. ಪಯಣದಲ್ಲಿ ರಜಪೂತ್ ಅವರ ಸಹಚರ ರಾಕೇಶ್ ಅವರೂ ಇದ್ದರು ಎಂದು ವಿಡಿಯೋ ತೋರಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುಮತ ಪಡೆದರೆ ಟ್ರಕ್ ಚಾಲಕರ ಸಮಸ್ಯೆಗಳನ್ನು ನೀಗಿಸಲು ಕ್ರಮ ಕೈಗೊಳ್ಳುವುದಾಗಿ ರಾಹುಲ್ ಅವರು ಚಾಲಕರ ಜೊತೆಗಿನ ಸಂವಾದದ ವೇಳೆ ಭರವಸೆ ನೀಡಿದ್ದಾರೆ.